ಹಿರೇಕೆರೂರ: ಪಟ್ಟಣದಿಂದ ಹಾವೇರಿಗೆ ಹೋಗುವ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ವಿದ್ಯುತ್ ಪರಿವರ್ತಕ (ಟಿ.ಸಿ.) ಅಪಾಯ ತಂದೊಡ್ಡುವ ಸ್ಥಿತಿಯಲ್ಲಿದೆ.
ಪಟ್ಟಣದಿಂದ ಸರ್ವಜ್ಞ ವೃತ್ತದ ಮಾರ್ಗವಾಗಿ ಹಾವೇರಿ, ಸಾಗರಕ್ಕೆ ತೆರಳುವ ರಾಜ್ಯ ಹೆದ್ದಾರಿ ಇದಾಗಿದೆ. ಈ ರಸ್ತೆಯ ಸಿಇಎಸ್ ವಿದ್ಯಾಸಂಸ್ಥೆಯ ಕಾಂಪೌಂಡ್ ಬಳಿಯ ಅಳವಡಿಸಿರುವ ಟಿ.ಸಿ. ಹಳೆಯದಾಗಿದ್ದು, ನಿತ್ಯ ಒಂದಿಲ್ಲೊಂದು ತೊಂದರೆ ಹಾಗೂ ಅಪಾಯವನ್ನುಂಟು ಮಾಡುತ್ತಿದೆ. ಟಿಸಿಯಲ್ಲಿ ಒಮ್ಮೊಮ್ಮೆ ಭಾರಿ ಶಬ್ಧ ಉಂಟಾಗುತ್ತದೆ. ಅಲ್ಲದೆ, ಆಗಾಗ ಬೆಂಕಿಯೂ ಹೊತ್ತಿಕೊಳ್ಳುತ್ತದೆ. ಇದರಿಂದ ಜನ ಭಯಭೀತಿಯಿಂದ ಓಡಾಡುವಂತಾಗಿದೆ.
ಟಿಸಿ ಇರುವ ರಸ್ತೆ ಮಾರ್ಗವಾಗಿ ನಿತ್ಯ ಸಾವಿರಾರು ವಾಹನ, ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಈ ಮೊದಲು ಜಿಲ್ಲಾ ಮುಖ್ಯರಸ್ತೆಯನ್ನು ಮೇಲ್ದರ್ಜೆಗೇರಿಸಿ ಸಾಗರ-ಹಾವೇರಿ ರಾಜ್ಯ ಹೆದ್ದಾರಿಯನ್ನಾಗಿಸಲಾಗಿದೆ. ಕೆಆರ್‌ಡಿಸಿಎಲ್‌ನವರು ರಸ್ತೆ ವಿಸ್ತರಣೆ ಮಾಡಿ ಅಭಿವೃದ್ಧಿಪಡಿಸಿದರು. ಇದೇ ರಸ್ತೆಯಲ್ಲಿದ್ದ ಪುರಾತನ ಆಲದಮರ ಹಾಗೂ ಅಲ್ಲಿರುವ ನಾಗರಕಟ್ಟೆಯನ್ನು ಸಾಕಷ್ಟು ವಿರೋಧದ ನಡುವೆ ತೆರವುಗೊಳಿಸಲಾಯಿತು. ಆದರೆ, ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಟಿ.ಸಿ. ಮಾತ್ರ ಸ್ಥಳಾಂತರಿಸಲಿಲ್ಲ.
ವಾಹನ ಹಾಗೂ ಪಾದಚಾರಿಗಳು ನಡೆದುಕೊಂಡು ಹೋಗುವಾಗ ಅಕಸ್ಮಾತ್ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಅವಘಡ ಸಂಭವಿಸುವ ಸಾಧ್ಯತೆಗಳಿವೆ. ಅನಾಹುತ ಸಂಭವಿಸುವ ಮೊದಲೇ ಇಲ್ಲಿರುವ ಟಿಸಿಯನ್ನು ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಹೆದ್ದಾರಿ ಪಕ್ಕ ಇರುವ ಅತೀ ಹಳೆಯದಾದ ಟಿ.ಸಿ. ಸ್ಥಳಾಂತರಿಸಲು ಅಕ್ಕಪಕ್ಕದಲ್ಲಿ ಸ್ಥಳದ ಕೊರತೆಯಿದೆ. ಅಕಸ್ಮಾತ್ ಬೇರೆ ಜಾಗದಲ್ಲಿ ಅಳವಡಿಸಿದರೆ ಅಲ್ಲಿರುವ ಅಂಗಡಿಗಳಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜಿನಲ್ಲಿ ತೊಂದರೆಯಾಗಲಿದೆ. ಬರುವ ದುರ್ಗಾದೇವಿ ಜಾತ್ರೆಯ ಒಳಗಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು.> ನೂರಹ್ಮದ್, ಹೆಸ್ಕಾಂ ಸಹಾಯಕ ಇಂಜಿನಿಯರ್ ಟಿ.ಸಿ.ಯಲ್ಲಿ ಆಗಾಗ ಭಾರಿ ಪ್ರಮಾಣದ ಶಬ್ಧ ಬರುತ್ತದೆ ಹಾಗೂ ಬೆಂಕಿ ಹೊತ್ತಿಕೊಳ್ಳುತ್ತದೆ. ಇದರಿಂದ ಇಲ್ಲಿ ಸಂಚರಿಸುವ ಪಾದಚಾರಿಗಳು, ಮಕ್ಕಳು, ವಾಹನ ಸವಾರರು ಭಯಪಡುತ್ತಿದ್ದಾರೆ. ಅನಾಹುತ ಸಂಭವಿಸುವ ಮೊದಲು ಸೂಕ್ತ ಸ್ಥಳಕ್ಕೆ ಟಿ.ಸಿ. ಸ್ಥಳಾಂತರಿಸಬೇಕು.> ನಿಂಗರಾಜ ದಂಡಗೀಹಳ್ಳಿ, ಸ್ಥಳೀಯ ನಿವಾಸಿ