ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ಒಳ ಹರಿವಿನಲ್ಲಿ ಭಾರಿ ಏರಿಕೆ ಕಂಡಿದ್ದು, ಜಲಾಶಯಕ್ಕೆ 51654 ಕ್ಯುಸೆಕ್ ನೀರು ಹರಿದು ಬರುತ್ತಿದೆ.
ಜಲಾಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಹಾಗೂ ತುಂಗಾ ಜಲಾಶಯದಿಂದ 27628 ಕ್ಯುಸೆಕ್ ನೀರು ನದಿಗೆ ಬಿಟ್ಟಿರುವುದರಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾವೇರಿ, ದಾವಣಗೆರೆ, ಹರಿಹರ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ಜಲಾಶಯಕ್ಕೆ ಒಟ್ಟು 51 ಸಾವಿರ ಕುಸೆಕ್ ನೀರು ಹರಿದು ಬರುತ್ತಿದೆ.
ಬುಧವಾರ ತುಂಗಭದ್ರಾ ಜಲಾಶಯದ ಒಳ ಹರಿವು 14 ಸಾವಿರ ಕ್ಯುಸೆಕ್ ಒಳಹರಿವಿತ್ತು. 105.788 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 30.487 ಟಿಎಂಸಿ ನೀರು ಈಗಾಗಲೇ ಸಂಗ್ರಹವಿತ್ತು. ಬುಧವಾರ ಮಧ್ಯಾಹ್ನಕ್ಕೆಲ್ಲ ಜಲಾಶಯಕ್ಕೆ 4 ಟಿಎಂಸಿಯಷ್ಟು ನೀರು ಹರಿದು ಬಂದಿದೆ. ಇದೇ ರೀತಿ ಒಳಹರಿವು ಬಂದರೆ ಆದಷ್ಟು ಬೇಗ ಜಲಾಶಯ ಭರ್ತಿಯಾಗಲಿದೆ. ಜಲಾಶಯ ಬೇಗನೆ ತುಂಬುವ ಆಶಾಭಾವ ಕೂಡ ರೈತರಲ್ಲಿ ಒಡಮೂಡಿದೆ.