ಹೊಸಪೇಟೆ : ತುಂಗಭದ್ರಾ ಜಲಾಶಯದ ಒಳಹರಿವು 82 ಸಾವಿರಕ್ಕೆ ತಗ್ಗಿರುವ ಹಿನ್ನೆಲೆಯಲ್ಲಿ ಜಲಾಶಯದಿಂದ ಸೋಮವಾರ 12 ಗೇಟ್‌ಗಳನ್ನು ತೆರೆದು 50 ಸಾವಿರ ಕ್ಯುಸೆಕ್ ನೀರು ನದಿಗೆ ಬಿಡಲಾಯಿತು.
ಕಳೆದ ಒಂದು ವಾರದಿಂದ ನಿರಂತರ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಬಿಟ್ಟಿದ್ದರಿಂದ ಹಂಪಿ ತುಂಗಭದ್ರಾ ನದಿ ತೀರದ ಕೆಲ ಸ್ಮಾರಕಗಳು ಜಲಾವೃತವಾಗಿದ್ದವು. ಸೋಮವಾರ ಗೋಚರಿಸುತ್ತಿವೆ. ಸೀತೆ ಸೆರಗು, ಸುಗ್ರೀವ ಗುಹೆ ಬಳಿ ನೀರು ಹರಿಯುತ್ತಿಲ್ಲ. ಇನ್ನೂ ಪುರಂದರದಾಸರ ಮಂಟಪ ಕೂಡ ಸ್ವಲ್ಪ ಕಾಣಿಸತೊಡಗಿದೆ. ಜಲಾಶಯದ ಮೇಲ್ಭಾಗದಲ್ಲಿ ಮಳೆ ಕಡಿಮೆಯಾಗಿರುವುದರಿಂದ ಜಲಾಶಯದ ಒಳ ಹರಿವು ತಗ್ಗಿದೆ.
ಭದ್ರಾ ಜಲಾಶಯದಿಂದ ಸೋಮವಾರ 13 ಸಾವಿರ ಕ್ಯೂಸೆಕ್ ಹಾಗೂ ತುಂಗಾ ಜಲಾಶಯದಿಂದ 32 ಸಾವಿರ ಕ್ಯೂಸೆಕ್ ಹಾಗೂ ಅಷ್ಟೆ ಪ್ರಮಾಣದಲ್ಲಿ ವರದ ನದಿಯ ನೀರು ತುಂಗಭದ್ರಾ ಜಲಾಶಯಕ್ಕೆ ಹರಿದು ಬರುತ್ತಿದೆ. ಸೋಮವಾರ ಸಂಜೆ 6 ಗಂಟೆ ವರದಿಗೆ 82.77 ಸಾವಿರ ಕ್ಯೂಸೆಕ್ ಒಳಹರಿವುಯಿದ್ದು, 12 ಗೇಟ್‌ಗಳನ್ನು 2 ಅಡಿ ಎತ್ತರಿಸಿ 50.15 ಸಾವಿರ ಕ್ಯೂಸೆಕ್ ನದಿಗೆ ಹರಿಸಲಾಗಿದೆ. 1633 ಅಡಿಯ ಜಲಾಶಯಕ್ಕೆ 1631.68 ಅಡಿ ನೀರು ಭರ್ತಿಯಾಗಿದ್ದು, 100.523 ಟಿಎಂಸಿ ನೀರು ಸಂಗ್ರಹವಾಗಿದೆ.