ತುಂಗಭದ್ರಾ ಜಲಾಶಯದ 28 ಕ್ರಸ್ಟ್ ಗೇಟ್ಗಳ ಮೂಲಕ ಹೆಚ್ಚುವರಿ ನೀರು ನದಿಗೆ ಹರಿಸಲಾಗಿದೆ. 
ಜಿಲ್ಲೆ

ಟಿಬಿಡ್ಯಾಂ 28 ಗೇಟ್‌ಗಳಿಂದ ನೀರು ನದಿಗೆ

ಮಂಜುನಾಥ

ಹೊಸಪೇಟೆ: ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳ ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಹರಿದು ಒಳಹರವು ಮತ್ತಷ್ಟು ಏರಿಕೆಯಾದ ಹಿನ್ನೆಲೆಯಲ್ಲಿ 28 ಕ್ರಸ್ಟ್ ಗೇಟ್‌ಗಳ ಮೂಲಕ 75774 ಕ್ಯೂಸೆಕ್ಸ್ ಹೆಚ್ಚುವರಿ ನೀರನ್ನು ಗುರುವಾರ ನದಿಗೆ ಹರಿಸಲಾಯಿತು.

ಮಲೆನಾಡಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಒಳ ಹರಿವು ಹೆಚ್ಚಳವಾಗಿದೆ. ಹೀಗಾಗಿ ಜಲಾಶಯದ 33 ಗೇಟ್‌ಗಳ ಪೈಕಿ 28 ಗೇಟ್‌ಗಳನ್ನು ತೆರೆದು ನದಿಗೆ ಹೆಚ್ಚುವರಿ ನೀರನ್ನು ಹರಿಸಲಾಗಿದೆ. 81030 ಕ್ಯೂಸೆಕ್ಸ್ ನಷ್ಟು ಒಳ ಹರಿವು ಹರಿದು ಬರುತ್ತಿದೆ.

ಸದ್ಯ ಜಲಾಶಯದಲ್ಲಿ 1632.20 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಬುಧವಾರ 28 ಕ್ರಸ್ಟ್ ಗೇಟ್‌ಗಳ ಮೂಲಕ 18686 ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸಲಾಗಿತ್ತು. 105.788 ಟಿಎಂಸಿ ಸಾಮರ್ಥ್ಯದ ಜಲಾಶಯಕ್ಕೆ ಈಗಾಗಲೇ 102.576 ಟಿಎಂಸಿ ನೀರು ಸಂಗ್ರಹವಾಗಿದೆ.

ನದಿಗೆ ಹೆಚ್ಚುವರಿ ನೀರು ಹರಿಸಿದ ಪರಿಣಾಮ ಹಂಪಿ ತುಂಗಭದ್ರಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ನದಿ ತಟದಲ್ಲಿರುವ ಸ್ಮಾರಕಗಳು ಮುಳಗಡೆಯಾಗಿವೆ. ವಿರೂಪಾಕ್ಷೇಶ್ವರ ದೇವಾಲಯದ ಬಳಿ ಇರುವ ಸ್ನಾನಘಟ್ಟ, ವೈದಿಕ ಮಂಟಪ, ಜನಿವಾರ ಮಂಟಪ, ಹಾಗೂ ಪುರಂದರ ದಾಸರ ಮಂಟಪ, ವಿಜಯನಗರ ಅರಸರ ಕಾಲದ ಸೇತುವೆ. ಕೋಟಿಲಿಂಗ ನದಿ ನೀರಿನಲ್ಲಿ ಮುಳಗಡೆಯಾಗಿವೆ.