ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಬೆನ್ನು ಮೂಳೆಯ ಟಿಬಿ ಕಾಯಿಲೆ ಗೆದ್ದ ಬಾಲಕಿ ಮುಸ್ಕಾನ್‌ಗೆ ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹುಟ್ಟಿದ ದಿನವೆಂದು ೋಷಿಸಿ ಆಸ್ಪತ್ರೆಯ ಆಡಳಿತ ಮಂಡಳಿಯಿಂದ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿ, ಟಿಬಿ ಚಾಂಪಿಯನ್ ಎಂದು ಗುರುತಿಸಲಾಯಿತು.
ಮೂಳೆ ತಜ್ಞ ಡಾ.ಮಂಜುನಾಥ್ ಮಾತನಾಡಿ, ಆರಂಭಿಕವಾಗಿ ಅನೇಕ ತಪಾಸಣೆ ನಂತರ ಬಾಲಕಿಗೆ ಬೆನ್ನು ಮೂಳೆಯ ಕ್ಷಯ ರೋಗ ಲಕ್ಷಣ ಪತ್ತೆಯಾಯಿತು. ಒಂದು ವರ್ಷದ ಚಿಕಿತ್ಸೆ ಹಾಗೂ ಆರೈಕೆಯೊಂದಿಗೆ ಪೌಷ್ಟಿಕ ಆಹಾರ ನೀಡಿದ್ದರಿಂದ ಆಕೆ ಗುಣಮುಖವಾಗಿದ್ದರಿಂದ ಟಿಬಿ ಚಾಂಪಿಯನ್ ಎಂದು ಗುರುತಿಸಲಾಗಿದೆ. ಟಿಬಿ ಬಗ್ಗೆ ಭಯಪಡುವ ಅಗತ್ಯವಿಲ್ಲ, ಅದನ್ನು ಗುಣಪಡಿಸಬಹುದಾಗಿದೆ ಎಂದು ಹೇಳಿದರು.
ಸತತ ಒಂದು ವರ್ಷದ ಚಿಕಿತ್ಸೆ ಫಲಪ್ರದ: ವರ್ಷದ ಹಿಂದೆ ಮುಸ್ಕಾನ್ (16) ಅವರನ್ನು ಸಣ್ಣ ಮಗುವಿನಂತೆ ಕೈಯಲ್ಲಿ ಎತ್ತಿಕೊಂಡು ಬಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಹಳಷ್ಟು ಆಸ್ಪತ್ರೆಗಳಲ್ಲಿ ತೋರಿಸಿದರೂ ರೋಗ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಮಗಳ ಪರಿಸ್ಥಿತಿ ಕಂಡು ತಂದೆ ಇಮಾಮುದ್ದೀನ್, ತಾಯಿ ನಗರಬಿಬಿ ಕಷ್ಟ ಅನುಭವಿಸುತ್ತಿದ್ದರು. ಉತ್ತರಪ್ರದೇಶದಿಂದ ಉದ್ಯೋಗಕ್ಕಾಗಿ ಬಂದಿದ್ದ ಆ ಕುಟುಂಬ ಮನೆಯ ಮಾಲೀಕರ ಸಹಾಯದಿಂದ ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದರು.
ಮೂಳೆ ತಜ್ಞ ಡಾ.ಮಂಜುನಾಥ ಮತ್ತು ಡಾ.ಗಿರೀಶ್ ನೇತೃತ್ವದ ವೈದ್ಯರ ತಂಡ ಕ್ಲಿನಿಕಲ್ ಡಯಾಗ್ನಿಸಿಸ್ ಮಾಡಿ ಬೆನ್ನುಹುರಿಯ ಕ್ಷಯರೋಗ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಜತೆಗೆ ಬಾಲಕಿಗೆ ಪರಿಣಾಮಕಾರಿ ಚಿಕಿತ್ಸೆ ಆರಂಭಿಸಿದರು. ಚಿಕಿತ್ಸೆ ಪೂರ್ಣಗೊಂಡು ಒಂದು ವರ್ಷ ತುಂಬಿದ್ದು, ಸಂಪೂರ್ಣ ಗುಣಮುಖಳಾದ ಹಿನ್ನೆಲೆಯಲ್ಲಿ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.