ಕೊಪ್ಪಳ ತಾಲೂಕಿನ ಮುನಿರಾಬಾದ್​ ತುಂಗಭದ್ರಾ ಜಲಾಶಯದಿಂದ ಶುಕ್ರವಾರ ಕಾಲುವೆಗೆ ನೀರು ಹರಿಸಲಾಯಿತು. ಸಂಸದ ರಾಜಶೇಖರ ಹಿಟ್ನಾಳ, ಕಾಡಾ ಅಧ್ಯಕ್ಷ ಹಸನಸಾಬ್​ ದೋಟಿಹಾಳ, ರಡ್ಡಿ ಶ್ರೀನಿವಾಸ, ರೈತ ಮುಖಂಡರಿದ್ದರು. 
ಜಿಲ್ಲೆ

ಜಲಾಶಯದಿಂದ ನಾಲೆಗಳಿಗೆ ನೀರು ಬಿಡುಗಡೆ, ರೈತರ ಮೊಗದಲ್ಲಿ ಮೂಡಿದ ಹರ್ಷ

ಕೊಪ್ಪಳ: ತಾಲೂಕಿನ ಮುನಿರಾಬಾದ್​ ತುಂಗಭದ್ರಾ ಜಲಾಶಯದಿಂದ ಶುಕ್ರವಾರ ಪೂಜೆ ನೆರವೇರಿಸುವ ಮೂಲಕ ಎಡದಂಡೆ ನಾಲೆಗಳಿಗೆ ನೀರು ಬಿಡುಗಡೆ ಮಾಡಲಾಯಿತು.

ಸಂಸದ ರಾಜಶೇಖರ ಹಿಟ್ನಾಳ, ಮುನಿರಾಬಾದ್​ ಕಾಡಾ ಅಧ್ಯಕ್ಷ ಹಸನಸಾಬ್​ ದೋಟಿಹಾಳ ಸ್ಟಾರ್ಟರ್​ ಬಟನ್​ ಒತ್ತುವ ಮೂಲಕ ನೀರು ಬಿಡುಗಡೆಗೊಳಿಸಿದರು. ಎಡದಂಡೆ ಮುಖ್ಯ ಕಾಲುವೆಗೆ 4,100 ಕ್ಯೂಸೆಕ್​ ನೀರು ಬಿಡಲಿದ್ದು, ಮೊದಲ ಹಂತದಲ್ಲಿ 2,200 ಕ್ಯೂಸೆಕ್​ ಬಿಡುಗಡೆ ಮಾಡಲಾಯಿತು. ಹಂತ ಹಂತವಾಗಿ 4,100 ಕ್ಯೂಸೆಕ್​ ಗೆ ಹೆಚ್ಚಿಸುವುದಾಗಿ ಅಧಿಕಾರಿಗಳು ತಿಳಿಸಿದರು.

ಈ ವೇಳೆ ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಜಲಾಶಯಕ್ಕೆ 1ಲಕ್ಷ 6 ಸಾವಿರ ಕ್ಯೂಸೆಕ್​ ಒಳ ಹರಿವು ಇದ್ದು, ಆರೇಳು ದಿನಗಳಲ್ಲಿ ಭರ್ತಿಯಾಗುವ ನಿರೀಕ್ಷೆಯಿದೆ. ಈ ಬಾರಿ ಎರಡು ಬೆಳೆಗಳಿಗೆ ನೀರು ಒದಗಿಸುವ ಭರವಸೆ ಇದ್ದು, ಇದರಿಂದ ರೈತರಿಗೆ ಅನುಕೂಲವಾಗಲಿದೆ. ಪಾಪಯ್ಯ ಟನಲ್​ ಸಮಸ್ಯೆ ಸೇರಿ ಇತರ ವಿಷಯಗಳ ಕುರಿತು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದೆಂದರು.

ಎಡದಂಡೆ ಮುಖ್ಯ ಕಾಲುವೆಗೆ ಹರಿದ ನೀರು.

ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿದೆ. ತುಂಗಾ ಜಲಾಶಯ ಭರ್ತಿಯಾಗಿದ್ದು, ನದಿಗೆ ನೀರು ಬಿಡಲಾಗಿದೆ. ಇದರಿಂದ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ. ನೀರು ಬಿಟ್ಟಾಗ 56 ಟಿಎಂಸಿ ಅಡಿ ನೀರು ಸಂಗ್ರಹವಿತ್ತು. ಈಗಿರುವ ಒಳಹರಿವು ಮುಂದುವರಿದಲ್ಲಿ ವಾರದಲ್ಲಿ ಜಲಾಶಯ ಭರ್ತಿಯಾಗಲಿದೆ. ತುಂಗಭದ್ರಾ ಜಲಾಶಯ ಒಟ್ಟು 105 ಅಡಿ ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ಕಳೆದ ವರ್ಷ ಇದೇ ಅವಧಿಗೆ ಕೇವಲ 11 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತೆಂದು ಅಧಿಕಾರಿಗಳು ಮಾಹಿತಿ ನೀಡಿದರು.

ಗ್ಯಾರಂಟಿ ಯೋಜನೆ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ರಡ್ಡಿ ಶ್ರೀನಿವಾಸ್​, ಪ್ರಮುಖರಾದ ಜನಾರ್ದನ ಹುಲಿಗಿ, ಸಿಇ ಎಲ್​.ಬಸವರಾಜ, ತಾಂತ್ರಿಕ ಸಹಾಯಕ ಬಸಪ್ಪ ಜಾನಕಾರ, ಇಇ ಎಂ.ಎಸ್​.ಗೋಟೇಕರ, ಗಿರೀಶ, ಅಮರೇಶ ಇತರರಿದ್ದರು.