ಜಿಲ್ಲೆ

ಕಾನೂನು ಕ್ರಮಕ್ಕೆ ಟ್ಯಾಕ್ಸಿ ಮಾಲೀಕರ ಸಂಘ ಮನವಿ

ಮುಂಡಗೋಡ: ಖಾಸಗಿ ಮಾಲೀಕತ್ವದ (ವೈಟ್ ಬೋರ್ಡ್) ವಾಹನಗಳನ್ನು ಬಾಡಿಗೆ ಆಧಾರದ ಮೇಲೆ ಉಪಯೋಗಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತಾಲೂಕು ಟ್ಯಾಕ್ಸಿ ಮಾಲೀಕರ ಸಂಘದವರು ತಹಸೀಲ್ದಾರ್ ಶಂಕರ ಗೌಡಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ತಾಲೂಕಿನಲ್ಲಿ ವಾಹನಗಳನ್ನು ಬೇಕಾಬಿಟ್ಟಿ ದರಗಳಲ್ಲಿ ಬಾಡಿಗೆಗೆ ಬಿಡುತ್ತಿದ್ದಾರೆ. ಇದರಿಂದ ನಮ್ಮ ಬದುಕು ಮೂರಾಬಟ್ಟೆಯಾಗುತ್ತಿದೆ. ಸರ್ಕಾರಕ್ಕೆ ಕಾಲ ಕಾಲಕ್ಕೆ ತೆರಿಗೆ ಪಾವತಿಸುತ್ತಿದ್ದೇವೆ. ಬಾಡಿಗೆಯಲ್ಲೇ ಬದುಕು ನಡೆಸುತ್ತಿದ್ದೇವೆ. ಹೀಗಿರುವಾಗ, ಖಾಸಗಿ (ವೈಟ್ ಬೋರ್ಡ್) ಮಾಲೀಕರು ನಮ್ಮ ಉದ್ಯೋಗವನ್ನು ಕಿತ್ತುಕೊಳ್ಳುತ್ತಿದ್ದಾರೆ. ಈ ಕುರಿತು ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ. ತಕ್ಷಣವೇ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಜುಲೈ 3ರಿಂದ ತಹಸೀಲ್ದಾರ್ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಮನವಿಯಲ್ಲಿ ಎಚ್ಚರಿಸಿದ್ದಾರೆ.

ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ರವಿ ಲಮಾಣಿ, ಉಪಾಧ್ಯಕ್ಷ ಅಮೀರದ್ದೀನ ಹುಲತ್ತಿ, ಜಗದೀಶ ಪಾಟೀಲ, ಲಕ್ಷ್ಮಣ ಚವಡಳ್ಳಿ ಇತರರಿದ್ದರು.