ಲೋಕೇಶ್.ಎಂ ಐಹೊಳೆ ಜಗಳೂರು
ಜಗಳೂರು ತಾಲೂಕಿನ ತೊರೆಸಾಲು ಭಾಗದ ಹುಚ್ಚವ್ವನಹಳ್ಳಿ ಸೇರಿ ಹತ್ತಾರು ಹಳ್ಳಿಗಳಲ್ಲಿ ಅತೀ ವೇಗವಾಗಿ ಗಾಳಿ ಬೀಸುತ್ತದೆ ಎಂಬ ಕಾರಣಕ್ಕೆ ಸಾಕಷ್ಟು ಸಂಖ್ಯೆಯ ವಿಂಡ್ ಕಂಪನಿಗಳು ಲಗ್ಗೆ ಇಟ್ಟಿವೆ.
ಈ ಭಾಗದಲ್ಲಿ ಎತ್ತ ಕಣ್ಣು ಹಾಯಿಸಿದರೂ ವಿಂಡ್ ಫ್ಯಾನ್ಗಳೇ ಕಣ್ಣಿಗೆ ರಾಚುತ್ತವೆ. ನವೀಕರಿಸಬಹುದಾದ ಎನರ್ಜಿ ಎಂಬ ಕಾರಣಕ್ಕೆ ಕೇಂದ್ರ ರಾಜ್ಯ ಸರ್ಕಾರಗಳು ಕೆಲ ಸಡಿಲಿಕೆ ನೀಡಿವೆ.
ಇದನ್ನೇ ಲಾಭ ಮಾಡಿಕೊಂಡ ಬಂಡವಾಳ ಶಾಹಿಗಳು ಬೇಕಾಬಿಟ್ಟಿ ಪವನ ವಿದ್ಯುತ್ ಯಂತ್ರ ಮತ್ತು ಸೋಲಾರ್ಗಳನ್ನು ಅಳವಡಿಸುವ ಭರದಲ್ಲಿ ರೈತರ ಜಮೀನಿನ ಮೇಲೆ ಕಣ್ಣು ಹಾಕಿವೆ.
ಸಂಸ್ಥೆಯೊಂದರ ಹೆಸರಿನಲ್ಲಿ ರೂಪಾಂತರಗೊಂಡಿರುವ 38 ಕಂಪನಿಗಳು ಜಗಳೂರು ತಾಲೂಕನ್ನು ಗುರಿಯಾಗಿಸಿ ಸುಮಾರು 1680 ಎಕರೆ ರೈತರ ಉತ್ಕೃಷ್ಟ ಜಮೀನುಗಳನ್ನು ಕಾನೂನುಬಾಹಿರವಾಗಿ ಖರೀದಿಸುತ್ತಿರುವ ಆರೋಪ ಕೇಳಿ ಬಂದಿದೆ.
ದಾವಣಗೆರೆ, ವಿಜಯನಗರ, ಚಿತ್ರದುರ್ಗದ ಗಡಿ ಗ್ರಾಮಗಳಾದ ಹುಚ್ಚವ್ವವನಹಳ್ಳಿ ಹಿರೇಮಲ್ಲನಹೊಳೆ, ಮಾದಮುತ್ತೇನಹಳ್ಳಿ, ಹುಚ್ಚವ್ವನಹಳ್ಳಿ ಕೊರಚರ ಹಟ್ಟಿ, ಯರೆಹಳ್ಳಿ, ಚಿಕ್ಕಮಲ್ಲನಹೊಳೆ ಸೇರಿ ಇತರೆಡೆ ಈ ಸಂಸ್ಥೆಗಳು ಮಧ್ಯವರ್ತಿಗಳ ಮೂಲಕ ರೈತರಿಂದ ಕಡಿಮೆ ದರಕ್ಕೆ ಭೂಮಿ ಖರೀದಿಸುತ್ತಿವೆ ಎಂಬ ಆಕ್ಷೇಪವಿದೆ.
ವಿದ್ಯುತ್ ಇಲಾಖೆ ನಿಯಮಗಳನ್ನು ಮೀರಿ, ಸಿಇಐಜಿ ವರದಿ ಪಡೆಯದೆ ಕರ್ನಾಟಕ ಭೂ ಸುಧಾರಣೆ ಕಾಯ್ದೆ ಅನ್ವಯ ಯಾವುದೇ ಇಲಾಖೆಗಳಿಂದ ಅನುಷ್ಠಾನದ ಆದೇಶ ಪಡೆಯದೆ ವಾಮಮಾರ್ಗದಲ್ಲಿ ಸೌರ ವಿದ್ಯುತ್ ಘಟಕ ಗಳನ್ನು ಸ್ಥಾಪಿಸಿ ತಮ್ಮ ಕ್ಷೇತ್ರ ವಿಸ್ತರಿಸುತ್ತಿವೆ. ಇದಕ್ಕೆ ಕೆಲ ಅಧಿಕಾರಿಗಳ ಕುಮ್ಮಕ್ಕಿದೆ ಎಂದು ಕೃಷಿಕರು ದೂರಿದ್ದಾರೆ.
ನಿಯಮಾವಳಿಗಳನ್ನು ಉಲ್ಲಂಘಿಸಿ ವಂಚಿಸುವ ಕಂಪನಿಗಳ ವಿರುದ್ಧ ಸಂಬಂಧಿಸಿದ ಇಲಾಖೆಗಳ ಮೂಲಕ ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ರೈತರು ಆಗ್ರಹಿಸಿದ್ದಾರೆ.
ಕೃಷಿ ಜಮೀನುಗಳಲ್ಲೇ ಬೃಹತ್ ಯಂತ್ರಗಳನ್ನು ಸ್ಥಾಪಿಸಿದ್ದಾರೆ. ಇದರಿಂದ ಸರ್ಕಾರಕ್ಕೆ ಬರಬೇಕಾದ ಕೋಟ್ಯಂತರ ರೂ. ತೆರಿಗೆಯಲ್ಲಿ ಮೋಸವಾಗುತ್ತಿದೆ. ಕಂದಾಯ ಇಲಾಖೆ ಅಧಿಕಾರಿಗಳಿಗೆ ಈ ವಿಷಯ ಗೊತ್ತಿದ್ದರೂ ಮೌನಕ್ಕೆ ಶರಣಾಗಿದ್ದಾರೆ.
ಗ್ರಾಮ ಪಂಚಾಯಿತಿ ಆಡಳಿತಗಳು ತೆರಿಗೆ ಮೋಸಕ್ಕೆ ಆಕ್ರೋಶ ವ್ಯಕ್ತಪಡಿ ಸಿವೆ. ಸರ್ಕಾರ ಈ ಕಂಪನಿಗಳಿಗೆ ಹಣ ಕೊಟ್ಟೇ ವಿದ್ಯುತ್ ಖರೀದಿಸುತ್ತದೆ. ಹೀಗಿದ್ದರೂ ಕಾನೂನು ಉಲ್ಲಂಘಿಸಿ ತೆರಿಗೆ ವಂಚನೆ ಮಾಡುತ್ತಿರುವ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು.
ಕಂದಾಯ ಸಚಿವರು ತಾಲೂಕಿನ ವಿಂಡ್ ಕಂಪನಿಗಳ ದರ್ಬಾರ್ಗೆ ಕಡಿವಾಣ ಹಾಕಬೇಕು ಎಂದು ಆರ್.ಎಸ್. ಕೃಪಾ, ಆರ್.ಎಸ್. ಕವಿತಾ, ಆರ್.ಡಿ. ರಾಜೀವ್, ಕೆ. ಅರ್ಪಿತಾ ಮತ್ತು ಸತ್ಯನಾರಾಯಣ ರೆಡ್ಡಿ ಒತ್ತಾಯಿಸಿದ್ದಾರೆ.
ಎನ್ಒಸಿ ಪಡೆಯದೇ ಫ್ಯಾನ್ ಅಳವಡಿಕೆ: ವಿಂಡ್ ಫ್ಯಾನ್ ಅಳವಡಿಕೆಗೆ ಮೊದಲು ಗ್ರಾಪಂಗೆ ತೆರಿಗೆ ಪಾವತಿಸಿ ಅನುಮತಿ ಪಡೆದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೃಷಿ ಜಮೀನನ್ನು ಕೃಷಿಯೇತರ ಎಂದು ಪರಿವರ್ತನೆ ಮಾಡಿಕೊಳ್ಳಬೇಕು. ಬಳಿಕ ಪಂಚಾಯಿತಿಯಲ್ಲಿ ಎನ್ಒಸಿ ಪಡೆಯ ಬೇಕು. ಆದರೆ ಈ ಯಾವ ಕೆಲಸ ಮಾಡದೇ ವಿಂಡ್ ಕಂಪನಿಗಳು ನೂರಾರು ಪವನ ಯಂತ್ರಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದಿಸುತ್ತಿವೆ ಎಂಬ ದೂರಿದೆ.
ನಕಾಶೆ ದಾರಿ ನಾಶ: ಹುಚ್ಚವ್ವನಹಳ್ಳಿ ಗ್ರಾಮದಿಂದ ಮಾದೇಮುತ್ತೇನಹಳ್ಳಿ ಸೇರಿ ಮುಂದಿನ ಊರು ಗಳಿಗೆ ಹೋಗುವ ದಾರಿಗಳನ್ನು ಸೋಲಾರ್ ಅಳವಡಿಸುವ ನೆಪದಲ್ಲಿ ಒತ್ತುವರಿ ಮಾಡಿ ಮೂಲ ನಕಾಶೆಗಳನ್ನು ನಾಶ ಪಡಿಸಿ, ಗ್ರಾಮಗಳ ಸಂಪರ್ಕ ರಸ್ತೆಗಳಿಗೆ ಕಾಂಪೌಂಡ್ ನಿರ್ವಿುಸಿ, ಸೌರಶಕ್ತಿ ಯೋಜನೆ ವಿಸ್ತರಿಸಿವೆ. ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿವೆ ಎಂದು ಹುಚ್ಚವ್ವನಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಪಾಲನೆ ಆಗದ ನಿಯಮಾವಳಿ: ರೈತರ ಜಮೀನು ಖರೀದಿಸಿ ಸೋಲಾರ್, ವಿಂಡ್ ಫ್ಯಾನ್ ಅಳವಡಿಕೆಗೆ ಮೊದಲು ಗ್ರಾಪಂ ಪರವಾನಗಿ, ಕೃಷಿಯೇತರ ಭೂಮಿಯಾಗಿ ಮಾರ್ಪಾಡು, ನಾನಾ ಇಲಾಖೆಗಳಿಂದ ಒಪ್ಪಿಗೆ ಪತ್ರ ಅದರೊಂದಿಗೆ ಐಎಸ್ಐ ಹಾಗೂ ಐಎಸ್ಒ ಪ್ರಮಾಣ ಪತ್ರ ಹೊಂದಿರಬೇಕು. ಆದರೆ ಕಂಪನಿಗಳು ಯಾವುದೇ ಕ್ರಮಗಳನ್ನು ಅನುಸರಿಸುತ್ತಿಲ್ಲ ಎಂಬ ಆರೋಪಗಳಿವೆ.