| ವಿಲಾಸ್ ಮೇಲಗಿರಿ ಬೆಂಗಳೂರು
ಬಿಲ್ ಕಲೆಕ್ಟರ್ ಹುದ್ದೆ ಖಾಲಿ, ಆಸ್ತಿ ಸರ್ವೇ ಬಾಕಿ, ಜವಾಬ್ದಾರಿ ಹಂಚಿಕೆಯಲ್ಲಿನ ನ್ಯೂನತೆ, ಪಿಒಎಸ್ ಮಷಿನ್ ತಾಂತ್ರಿಕ ಸಮಸ್ಯೆಗಳಿಂದ ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ವಸೂಲಿ ಕುಂಠಿತವಾಗಿದೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ ತೆರಿಗೆ ವಸೂಲಿಗೆ ಪಿಡಿಒಗಳ ಮೇಲೆ ಗದಾ ಪ್ರಹಾರಕ್ಕೆ ಸರ್ಕಾರ ಮುಂದಾಗಿದೆ.
ರಾಜ್ಯದಲ್ಲಿ 5983 ಗ್ರಾಪಂಗಳಿದ್ದು, ಪಂಚತಂತ್ರ 2.0 ಪ್ರಕಾರ ಪಂಚಾಯಿತಿ ವ್ಯಾಪ್ತಿಯಲ್ಲಿ 1.36 ಕೋಟಿ ಆಸ್ತಿಗಳಿವೆ. ತೆರಿಗೆ ಜಾಲದಿಂದ 1 ಕೋಟಿಗೂ ಹೆಚ್ಚು ಅಸ್ತಿ ಹೊರಗುಳಿದಿವೆ. ಸಕ್ಕರೆ ಕಾರ್ಖಾನೆ, ಶಿಕ್ಷಣ ಸಂಸ್ಥೆ, ಕೈಗಾರಿಕೆ, ಕೈಗಾರಿಕಾ ವಸಾಹತುಗಳಿಂದ ತೆರಿಗೆ ಸರಿಯಾಗಿ ಬರುತ್ತಿಲ್ಲ. ಈಗಿರುವ 1.36 ಕೋಟಿ ಆಸ್ತಿಗೆ ಸುಮಾರು 3000 ಕೋಟಿ ರೂ. ತೆರಿಗೆ ವಸೂಲಿ ಗುರಿಯನ್ನು ಸರ್ಕಾರ ಹೊಂದಿದೆ. ಆದರೆ, ಈವರೆಗೆ 1000 ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. ಪೂರ್ಣ ಪ್ರಮಾಣದಲ್ಲಿ ಆಸ್ತಿ ಸಮೀಕ್ಷೆ ನಡೆಸಿ ತೆರಿಗೆ ಜಾಲಕ್ಕೆ ತಂದರೆ 10,000 ಕೋಟಿ ರೂ. ಸಂಗ್ರಹದ ಅಂದಾಜಿದೆ. ಆದರೆ ತೆರಿಗೆ ವಸೂಲಿಗೆ ಹತ್ತಾರು ಸಮಸ್ಯೆಗಳು ಕಾಡುತ್ತಿವೆ. ಇವುಗಳಿಗೆ ಪರಿಹಾರ ಕಲ್ಪಿಸದೆ ಸರ್ಕಾರ ಪಿಡಿಒಗಳ ಮೇಲೆ ಬರೆ ಎಳೆಯಲು ಹೊರಟಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ.
ಬಿಲ್ ಕಲೆಕ್ಟರ್ ಹುದ್ದೆ ಖಾಲಿ: ಅಂದಾಜಿನ ಪ್ರಕಾರ 1500 ಬಿಲ್ ಕಲೆಕ್ಟರ್ ಹುದ್ದೆ ಖಾಲಿ ಇವೆ. 700ಕ್ಕೂ ಹೆಚ್ಚು ಬಿಲ್ ಕಲೆಕ್ಟರ್‌ಗೆ ಬಡ್ತಿ ನೀಡಿದ್ದು, ಈ ಹುದ್ದೆ ಭರ್ತಿ ಆಗಿಲ್ಲ. ಬಿಲ್ ಕಲೆಕ್ಟರ್ ಇಲ್ಲದಾಗ ತೆರಿಗೆ ವಸೂಲಿ ಮಾಡುವುದಾದರೂ ಹೇಗೆ? ಇದು ತೆರಿಗೆ ವಸೂಲಿಗೆ ದೊಡ್ಡ ತಲೆನೋವಾಗಿದೆ. ತೆರಿಗೆ ವಿಚಾರ ಬಂದಾಗ ಕಾಯ್ದೆಯಲ್ಲಿ ಸದಸ್ಯರಿಗೂ ಹೊಣೆಗಾರಿಕೆ ಇದೆ. ಜಾಬ್ ಚಾರ್ಟ್ ಪ್ರಕಾರ ಗ್ರಾಪಂ ಕಾರ್ಯದರ್ಶಿಗೆ ಮೇಲ್ವಿಚಾರಣಾ ಜವಾಬ್ದಾರಿ ಕೊಡಲಾಗಿದೆ. ಆದರೆ ನೋಟಿಸ್, ಲಘು ದಂಡನೆ ವಿಚಾರ ಬಂದಾಗ ಪಿಡಿಒಗಳನ್ನೇ ಗುರಿಯಾಗಿಸಲಾಗುತ್ತದೆ.
ಸಿಇಒಗೂ ಅಧಿಕಾರವಿಲ್ಲ!: ಬಿಲ್ ಕಲೆಕ್ಟರ್‌ಗಳು ಕರ್ತವ್ಯಲೋಪ ಎಸಗಿದಾಗ ಪಿಡಿಒ, ಇಒ, ಸಿಇಒಗೂ ಕ್ರಮ ಕೈಗೊಳ್ಳುವ ಅಧಿಕಾರವಿಲ್ಲ. ಈ ಅಧಿಕಾರ ಗ್ರಾಪಂ ಸಮಿತಿಗಳಿಗಿದೆ. ಬಿಲ್ ಕಲೆಕ್ಟರ್‌ಗಳಿಗೆ ಮೂಗುದಾರ ಹಾಕಿ ಕೆಲಸ ಮಾಡಿಸಿಕೊಳ್ಳುವುದು ಮೇಲಧಿಕಾರಿಗಳಿಗೆ ಕಷ್ಟವಾಗಿದೆ. ಅನೇಕ ಗ್ರಾಪಂಗಳಲ್ಲಿ ಕಾರ್ಯದರ್ಶಿ ಗ್ರೇಡ್-2 ಮತ್ತು ಎಸ್‌ಡಿಎಗಳ ಹುದ್ದೆ ಕೂಡ ಖಾಲಿ ಇದ್ದು, ಬಿಲ್ ಕಲೆಕ್ಟರ್ ಮೇಲೂ ಒತ್ತಡ ಹೆಚ್ಚಿದೆ.
ತೆರಿಗೆ ರಸೀದಿಯೋ? ಹೋಟೆಲ್ ಬಿಲ್ಲೋ?
ಪಿಒಎಸ್ ಮಷಿನ್‌ನಲ್ಲಿ ಜನರೇಟ್ ಆಗುವ ಬಿಲ್ ಹೋಟೆಲ್ ಬಿಲ್‌ನಂತಿದೆ. ವಾಟರ್ ಬಿಲ್/ಎಲೆಕ್ಟ್ರಿಕ್ ಬಿಲ್ ರೀತಿ ಆಸ್ತಿಯ ಸಂಪೂರ್ಣ ಮಾಹಿತಿ ಇಲ್ಲಿ. ಈ ರಸೀದಿ ನೀಡಿ ಜನರಿಗೆ ವಿಶ್ವಾಸ ಮೂಡಿಸುವುದು ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ನಿಯಮ 3ರ ಮಾದರಿಯಲ್ಲಿ ರಸೀದಿ ಒದಗಿಸುವ ಕೆಲಸವಾಗಬೇಕಿದೆ.
ಲಿಂಕ್, ಇ-ರಸೀದಿಯೂ ಇಲ್ಲ..
ಪಿಒಎಸ್ ಮಷಿನ್ ಮೂಲಕ ತೆರಿಗೆ ಪಾವತಿಸಿದರೆ ಆಸ್ತಿ ಮಾಲೀಕರಿಗೆ ಪಿಡಿಎಫ್ ಲಿಂಕ್ ಆಥವಾ ರಸೀದಿ ಬರುತ್ತಿಲ್ಲ. ಬಾಪೂಜಿ ಸೇವಾ ಕೇಂದ್ರದ ವೆಬ್‌ಸೈಟ್‌ಗೆ ಹೋಗಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ಇದು ಸಮಸ್ಯೆಯಾಗಿದೆ. ಆಸ್ತಿದಾರರ ಹೆಸರು/ಆಸ್ತಿ ಐಡಿ (18 ಅಂಕಿಗಳುಳ್ಳ) ಮೇಲೆ ಸರ್ಚ್ ಮಾಡಲು ಪಿಒಎಸ್‌ನಲ್ಲಿ ಅವಕಾಶವಿದೆ. ಅವುಗಳ ಜತೆ ಆಸ್ತಿ ನಂಬರ್ ಮೇಲೂ ಸರ್ಚ್‌ಗೆ ಅವಕಾಶ ಕಲ್ಪಿಸಬೇಕೆಂಬ ಬೇಡಿಕೆ ಇದೆ. ಲೈಸನ್ಸ್ ಪಡೆಯದೆ ನಿರ್ಮಿಸಲಾದ ಅಥವಾ ಕೃಷಿ ಜಮೀನಿನಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ಎರಡು ಪಟ್ಟು ತೆರಿಗೆ ವಿಧಿಸಬೇಕೆಂಬ ನಿಯಮವಿದೆ. ಆದರೆ ಅದು ಸಾಫ್ಟ್‌ವೇರ್ ನಲ್ಲಿ ಅಡಕವಾಗಿಲ್ಲ. ಇಂತಹ ಕಟ್ಟಡಗಳಿಂದ ನಿರ್ದಿಷ್ಟ ತೆರಿಗೆ ವಸೂಲಿ ಕಷ್ಟವಾಗಿದೆ.
ವೇತನ ಕೊಡುವುದೂ ಕಷ್ಟ: ಬಿಲ್ ಕಲೆಕ್ಟರ್/ ಅಟೆಂಡರ್ ಗಳಿಗೆ ಶೇ.40 ವೇತನವನ್ನು ಸ್ವಂತ ಸಂಪನ್ಮೂಲ, ಶೇ.60 ಸರ್ಕಾರದ ಅನುದಾನದಲ್ಲೇ ಕೊಡಬೇಕೆಂದು ಕಾನೂನು ಹೇಳುತ್ತದೆ. ಅಂದರೆ ಮಾಸಿಕ 30,000 ರೂ. ವೇತನ ಪಾವತಿಸಬೇಕಾದರೆ 1 ಲಕ್ಷ ರೂ. ತೆರಿಗೆ ವಸೂಲಿ ಮಾಡಬೇಕು. ವರ್ಷಕ್ಕೆ ಕನಿಷ್ಠ 4 ಲಕ್ಷ ರೂ. ತೆರಿಗೆ ವಸೂಲಾಗಬೇಕು. ಆದರೆ ಅನೇಕ ಕಡೆ ಅಷ್ಟು ವಸೂಲಾಗುತ್ತಿಲ್ಲ.
ಪಿಒಎಸ್ ಮಷಿನ್ ಸಮಸ್ಯೆ: ಗ್ರಾಪಂಗೊಂದು ಪಿಒಎಸ್ ಮಷಿನ್ ನೀಡಲಾಗಿದೆ. ದೊಡ್ಡ ಪಂಚಾಯಿತಿಗಳಲ್ಲಿ ಒಂದು ಮಷಿನ್‌ನಿಂದ ತೆರಿಗೆ ಸಂಗ್ರಹ ಕಷ್ಟ. ಮೊದಲು 2-3 ರಸೀದಿ ಪುಸ್ತಕ ನೀಡಿ ತೆರಿಗೆ ವಸೂಲು ಮಾಡಲಾಗುತ್ತಿತ್ತು. ಆದ್ದರಿಂದ ಕನಿಷ್ಠ 2 ಮಷಿನ್ ಕೊಡಬೇಕೆಂಬ ಬೇಡಿಕೆ ಇದೆ. ಪಿಒಎಸ್ ಮಷಿನ್ ಆಫ್ ಲೈನ್‌ನಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಕುಗ್ರಾಮ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಇಂಟರ್‌ನೆಟ್ ಸಮಸ್ಯೆ ಎದುರಾಗಿದೆ. ಪಿಒಎಸ್ ಮಷಿನ್‌ನಲ್ಲಿ ವಿಶೇಷ ನೀರಿನ ಕರ ವಸೂಲಿಗೆ ಪ್ರತ್ಯೇಕ ಅವಕಾಶ ಮಾಡಬೇಕು. ಇದರಿಂದ ಹೆಚ್ಚು ಸಂಪನ್ಮೂಲ ಕ್ರೋಡೀಕರಿಸಲು ಸಾಧ್ಯವಾಗುತ್ತದೆ.
ಆಸ್ತಿ ಸರ್ವೇ ಪೂರ್ಣ ಮುಗಿದಿಲ್ಲ: ಆಸ್ತಿ ಸರ್ವೇ ಶೇ.50 ಬಾಕಿ ಇದ್ದು, ಈ ಕೆಲಸದ ಒತ್ತಡದಲ್ಲಿ ಪಿಡಿಒ ಹಾಗೂ ಸಿಬ್ಬಂದಿ ಇದ್ದಾರೆ. ಇಂತಹ ಸಂದರ್ಭದಲ್ಲಿ ಪಿಒಎಸ್ ಮಷಿನ್ ಮೂಲಕ ತೆರಿಗೆ ವಸೂಲಿಗೆ ಒತ್ತಡ ಹೇರುವುದು ಹಾಗೂ ಕಡಿಮೆ ತೆರಿಗೆ ವಸೂಲಾದ ಪಿಡಿಒಗಳಿಗೆ ನೋಟಿಸ್ ನೀಡುವುದು ಎಷ್ಟು ಸರಿ ಎಂಬ ಪ್ರಶ್ನೆ ತಲೆ ಎತ್ತಿದೆ.
ಸಿಬ್ಬಂದಿಗೆ ತರಬೇತಿ ಇಲ್ಲ: ಹೊಸ ಯಂತ್ರಗಳನ್ನು ಅಳವಡಿಸಿಕೊಳ್ಳುವಾಗ ತರಬೇತಿ ಅವಶ್ಯ. ಆದರೆ ಶೇ.50 ಗ್ರಾಪಂ ಸಿಬ್ಬಂದಿಗೆ ಡಿಜಿಟಲ್ ಪೇಮೆಂಟ್ ಬಗ್ಗೆ ಪರಿಪೂರ್ಣ ಪರಿಜ್ಞಾನವಿಲ್ಲ. ಪೇಮೆಂಟ ಗೇಟ್ ವೇ ಮೂಲಕ ಪಾವತಿಸುವವ ತೆರಿಗೆ ಹಣ ಮರುದಿನವೇ ಗ್ರಾಪಂಗಳಿಗೆ ಜಮೆ ಆಗಬೇಕು. ಆದರೆ 3-4 ದಿನವಾಗುತ್ತಿದೆ. ಇದು ಅಡಿಟ್ ಸಂದರ್ಭದಲ್ಲಿ ಆಕ್ಷೇಪಣೆಗೆ ಅವಕಾಶವಾಗುತ್ತದೆ. ಗೂಗಲ್ ಪೇ. ಫೋನ್ ಪೇ ಮೂಲಕ ತೆರಿಗೆ ಪಾವತಿ ಬಗ್ಗೆ ಹೆಚ್ಚು ಪ್ರಚಾರ ನೀಡಿ ಪ್ರೋತ್ಸಾಹಿಸಬೇಕಿದೆ. ಪಿಒಎಸ್ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿ ಆಸ್ತಿ ಸರ್ವೇ ಪೂರ್ಣಗೊಂದ ಬಳಿಕ 2024-25ನೇ ಸಾಲಿನಿಂದ ಡಿಜಿಟಲ್ ತೆರಿಗೆ ಪಾವತಿ ಕಡ್ಡಾಯ ಗೊಳಿಸಬೇಕು ಎಂಬ ಆಗ್ರಹ ಗ್ರಾಪಂ ಸಿಬ್ಬಂದಿಯದ್ದಾಗಿದೆ.