ಆಸ್ತಿ ತೆರಿಗೆ ವಸೂಲಾತಿ ಆಂದೋಲನ 
ಜಿಲ್ಲೆ

ಜುಲೈವರೆಗೂ ಕಂದಾಯ ಪಾವತಿಗೆ ಅವಕಾಶ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ವಿಜಯಪುರ
ಜುಲೈವರೆಗೂ ಕಂದಾಯ ಪಾವತಿಗೆ ಅವಕಾಶವಿದ್ದು, ಜುಲೈ ನಂತರ ಪ್ರತಿ ತಿಂಗಳಿಗೆ ಶೇ.2 ದಂಡದೊಂದಿಗೆ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಕಂದಾಯ ಅಧಿಕಾರಿ ಚಂದ್ರು ತಿಳಿಸಿದರು.
ಪಟ್ಟಣದ ಜೆಸಿ ಬಡಾವಣೆಯಲ್ಲಿಹಮ್ಮಿಕೊಂಡಿದ್ದ ಆಸ್ತಿ ತೆರಿಗೆ ವಸೂಲಾತಿ ಆಂದೋಲನದಲ್ಲಿ ಮಾತನಾಡಿದರು. ಕಂದಾಯ ನಿರೀಕ್ಷಕ ತ್ಯಾಗರಾಜ ಮಾತನಾಡಿ, 2024-25ನೇ ಸಾಲಿನ ಹಾಗೂ ಹಿಂದಿನ ವರ್ಷಗಳ ಸ್ವಯಂಘೋಷಿತ ಆಸ್ತಿ ತೆರಿಗೆ ಪಾವತಿಸದೆ ಇರುವ ಆಸ್ತಿ ಮಾಲೀಕರಿಗೆ ಆಸ್ತಿ ತೆರಿಗೆ ಪಾವತಿಸಲು ಅನುಕೂಲವಾಗುವಂತೆ ತೆರಿಗೆ ವಸೂಲಾತಿ ಆಂದೋಲನ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಆಸ್ತಿ ತೆರಿಗೆಯೊಂದಿಗೆ ನೀರಿನ ಶುಲ್ಕ, ವಾಣಿಜ್ಯ ಮಳಿಗೆಗಳ ಬಾಡಿಗೆ, ಉದ್ದಿಮೆ ಪರವಾನಗಿ ಶುಲ್ಕ, ಜಾಹೀರಾತು ಶುಲ್ಕ ಹಾಗೂ ಯುಜಿಡಿ ಶುಲ್ಕಗಳನ್ನು ಸ್ಥಳದಲ್ಲಿಯೇ ಪಾವತಿಸಿ, ರಸೀದಿ ಪಡೆಯಬಹುದು ಎಂದರು.
ಫೋನ್ ಪೇ, ಗೂಗಲ್ ಪೇ ಮತ್ತಿತರ ಯುಪಿಐ ಆ್ಯಪ್‌ಗಳ ಮೂಲಕ ತೆರಿಗೆ ಪಾವತಿಸಿ, ರಸೀದಿ ಪಡೆಯಬಹುದು ಎಂದು ತಿಳಿಸಿದರು.
ಮೇ 17ರಂದು ಭರತ್ ನಗರದ ಅಂಗನವಾಡಿ ಕೇಂದ್ರದ ಸಮೀಪ, 18ರಂದು ರಹಮತ್ ನಗರದ ಮಸೀದಿ ಬಳಿ, 20ರಂದು ಶಿಡ್ಲಘಟ್ಟ ಡಿವಿಷನ್ ರಸ್ತೆಯ ಬಳಿ, 21ರಂದು ಸುಣ್ಣಕಲ್ಲು ಬೀದಿಯ ಎಲ್ಲಮ್ಮ ತಾಯಿ ದೇವಸ್ಥಾನದ ಸಮೀಪ, 22ರಂದು ಕೇಶವಸ್ವಾಮಿ ದೇವಾಲಯ ರಸ್ತೆಯ ಬ್ರಾಹ್ಮಣ ಕಲ್ಯಾಣ ಮಂಟಪದ ಬಳಿ, ಇದೇ ರೀತಿ ಮಹಬೂಬ್ ನಗರದ ನೂರಾನಿ ಮಸೀದಿ ಬಳಿ, ಕೋಟೆ ಬೀದಿಯ ಆನೇಕಲ್ ಛತ್ರದ ಸಮೀಪ, ಇಂದಿರಾನಗರ ಅಂಗನವಾಡಿ ಕೇಂದ್ರದ ಬಳಿ, ಮಂಡಿಬೆಲೆ ರಸ್ತೆಯ ಅಂಗನವಾಡಿ ಕೇಂದ್ರ, ಮಾರ್ಕೆಟ್ ರಸ್ತೆ ರಾಜೀವ್ ನಗರ, ಪ್ರಶಾಂತನಗರ, ಸೂಲಾಲದಿನ್ನೆ, ಬಲಿಜಬೀದಿ, ದುರ್ಗಾ ತಾಯಿ ಕಾಲನಿ, ಶಾಂತಿನಗರ ದರ್ಗಾ ಮೊಹಲ್ಲ, ರೆಡ್ಡಿ ಬೀದಿಗಳಲ್ಲಿ ಕಂದಾಯ ವಸೂಲಾತಿ ಆಂದೋಲನದ ಪ್ರಯುಕ್ತ ನಿಗದಿತ ದಿನಗಳಂದು ಪುರಸಭೆ ಸಿಬ್ಬಂದಿ ಸ್ಥಳದಲ್ಲಿಯೇ ಕಂದಾಯ ವಸೂಲಾತಿ ಮಾಡಿ, ರಶೀದಿ ನೀಡಲಿದ್ದಾರೆ ಎಂದು ವಿವರಿಸಿದರು.
ಪುರಸಭೆ ತೆರಿಗೆ ವಸೂಲಿದಾರ ಅನಿಲ್, ಜೋಶಿ, ಸಹಾಯಕರಾದ ಜನಾರ್ದನ್, ಮಂಜುನಾಥ್, ಮಮತಾ, ಪೂರ್ಣಿಮಾ, ಆಶಾ ಇದ್ದರು.