ಬೆಳಗಾವಿ: ಮಹಾನಗರ ಪಾಲಿಕೆಗೆ ವರ್ಷಗಳಿಂದ ತೆರಿಗೆ ಕಟ್ಟದೇ ವಂಚಿಸುತ್ತಿದ್ದ ಅಂಗಡಿಗಳ ಮೇಲೆ ಗುರುವಾರ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ಮಾರುತಿ ಗಲ್ಲಿ, ಖಡೇಬಜಾರ ಸೇರಿ ವಿವಿಧ ಕಡೆ ದಾಳಿ ನಡೆಸಿ ಬಿಸಿ ಮುಟ್ಟಿಸಿದರು. ಮತ್ತೊಂದೆಡೆ 10 ಲಕ್ಷಕ್ಕೂ ರೂ. ಅಧಿಕ ತೆರಿಗೆ ಬಾಕಿ ಉಳಿಸಿಕೊಂಡಿದ್ದ ರೆಸ್ಟೋರೆಂಟ್, ಅಂಗಡಿಗಳನ್ನು ಸೀಜ್ ಮಾಡಿದರು.
ಪ್ರತಿವರ್ಷ ಪಾಲಿಕೆಯು ಅಂದಾಜು 1.68 ಲಕ್ಷ ಆಸ್ತಿಗಳಿಂದ ವಾರ್ಷಿಕ 70 ರಿಂದ 80 ಕೋಟಿ ರೂ. ವರೆಗೆ ತೆರಿಗೆ ಸಂಗ್ರಹ ಗುರಿ ಹಾಕಿಕೊಳ್ಳುತ್ತದೆ. ಆದರೆ, ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ, ತೆರಿಗೆದಾರರು ಸ್ಪಂದಿಸದಿರುವ ಹಿನ್ನೆಲೆ 25 ರಿಂದ 20 ಕೋಟಿ ರೂ. ವರೆಗೆ ತೆರಿಗೆ ಬಾಕಿ ಉಳಿಯುತ್ತಿದೆ. ಇದರಿಂದಾಗಿ ಪಾಲಿಕೆಯ ದಿನನಿತ್ಯದ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಉಂಟುಮಾಡಿದೆ. ಅಲ್ಲದೆ, ಪಾಲಿಕೆಯಲ್ಲಿ ಹೊರಗುತ್ತಿಗೆ ಸಿಬ್ಬಂದಿ ವೇತನ, ಖರ್ಚು ವೆಚ್ಚಗಳನ್ನು ಪಾವತಿಸಲು ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆ ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿರುವ ಅಂಗಡಿಕಾರರ ಮೇಲೆ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ ಬಿಸಿ ಮುಟ್ಟಿಸುವ ಕೆಲಸ ಮಾಡಿದರು.
ಈಗಾಗಲೇ 2024-25ನೇ ಸಾಲಿನ ಆರ್ಥಿಕ ವರ್ಷದಲ್ಲಿ ಶೇ.60ರಷ್ಟು ಮಾತ್ರ ತೆರಿಗೆ ಸಂಗ್ರಹವಾಗಿದ್ದು, ಶೇ.40ರಷ್ಟು ತೆರಿಗೆ ಬಾಕಿ ಉಳಿದುಕೊಂಡಿದೆ. ನಗರದಲ್ಲಿ ಕೆಲ ವ್ಯಾಪಾರಿಗಳು, ಬಹುಮಹಡಿ ಕಟ್ಟಡಗಳ ಮಾಲೀಕರು, ವಾಣಿಜ್ಯ ಮಳಿಗೆಗಳಿಂದ 4ರಿಂದ 5 ವರ್ಷಗಳ ತೆರಿಗೆ ಬಾಕಿಯಿದೆ. ಶೇ.5ರಷ್ಟು ರಿಯಾಯಿತಿ
ನೀಡಿದರೂ ವ್ಯಾಪಾರಿಗಳು ಸ್ಪಂದಿಸುತ್ತಿಲ್ಲ. ನೋಟೀಸ್ ನೀಡಿದ ತಕ್ಷಣವೇ ಒಂದು ವರ್ಷದ ತೆರಿಗೆ ಕಟ್ಟಿ ಎರಡು ವರ್ಷದ ತೆರಿಗೆ ಬಾಕಿ
ಉಳಿಸಿಕೊಳ್ಳುತ್ತಾರೆ. ವರ್ಷಗಳಿಂದ ತೆರಿಗೆ ಕಟ್ಟಲು ಸಮಯ ಕೇಳುತ್ತಿದ್ದಾರೆ ವಿನಃ ತೆರಿಗೆ ಪಾವತಿಸುತ್ತಿಲ್ಲ.
ನಗರದಲ್ಲಿ ವಾರ್ಷಿಕ ನೂರಾರು ಕೋಟಿ ರೂ. ವ್ಯಾಪಾರು ವಹಿವಾಟು ನಡೆಸುತ್ತಿರುವ ಪ್ರತಿಷ್ಠಿತ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಕಂಪನಿಗಳು ಹಾಗೂ ಮಾಲೀಕರು 5 ಲಕ್ಷ ರೂ. ವರೆಗೆ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಕೆಲ ಪ್ರತಿಷ್ಠಿತ ಕಂಪನಿಗಳು, ಶಿಕ್ಷಣ ಸಂಸ್ಥೆಗಳು 10 ಲಕ್ಷ ರೂ.ಕ್ಕಿಂತ ಮೇಲ್ಪಟ್ಟು ತೆರಿಗೆ ಉಳಿಸಿಕೊಂಡಿವೆ ಎಂದು ಪಾಲಿಕೆ ಕಂದಾಯ ವಿಭಾಗದ ಅಧಿಕಾರಿಗಳು ದೂರಿದ್ದಾರೆ.