ಜಿಲ್ಲೆ

ತಾವರೆಕೆರೆ ವಾಟರ್ ಹಯಸಿಂತ್ ತೆರವಿಗೆ ಆಗ್ರಹ

ಸುನಿಲ್ ಪೊನ್ನೇಟಿ

ಮಡಿಕೇರಿ:

ಕುಶಾಲನಗರದ ತಾವರೆಕೆರೆಯಲ್ಲಿ ಆಕರ್ಷಕ ರೀತಿಯಲ್ಲಿ ಅರಳಿರುವ ಜಲಕಳೆ ನೀಲ ಪುಷ್ಪಗಳು ದಿನದಿಂದ ದಿನಕ್ಕೆ ಜನಾಕರ್ಷಣೆ ಪಡೆಯುತ್ತಿರುವುದು ಒಂದು ಕಡೆಯಾದರೆ ಅದರಿಂದ ಭವಿಷ್ಯದಲ್ಲಿ ಉಂಟಾಗಬಹುದಾದ ಸಮಸ್ಯೆಗಳು ಪರಿಸರ ಪ್ರಿಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಹೂವು ಈಗಾಗಲೇ ಸಮೀಪದ ಊರುಗಳಲ್ಲಿ ಕೆರೆಗಳನ್ನು ಆಪೋಷನ ತೆಗೆದುಕೊಂಡಿದ್ದು, ಜಲಚರಗಳÀ ವಾಸಕ್ಕೆ ನಿರುಪಯುಕ್ತವಾಗುವಂತೆ ಮಾಡಿದೆ. 'ಟೆರರ್ ಆಫ್ ಬಾಂಗ್ಲಾ' ಎಂದೇ ಕರೆಯಲಾಗುವ ಈ ಕಳೆಗಿಡಗಳನ್ನು ಕೂಡಲೇ ತಾವರೆಕೆರೆಯಿಂದ ನಿರ್ಮೂಲನೆ ಮಾಡುವಂತೆ ಒತ್ತಾಯಗಳು ಕೇಳಿ ಬರುತ್ತಿದೆ.

ಕುಶಾಲನಗರ ಸಮೀಪದ ಮರಡಿಯೂರು ಗ್ರಾಮದ ಕೆರೆಯೊಂದರ ತುಂಬಾ 2018-19ರಲ್ಲಿ ನೀಲವರ್ಣದ ಪುಷ್ಪರಾಶಿ ಹರಡಿಕೊಂಡು ಆಕರ್ಷಣೀಯವಾಗಿ ಕಂಗೊಳಿಸುತ್ತಾ ಜನರನ್ನು ಸೆಳೆಯುತ್ತಿತ್ತು. ಇದೆಷ್ಟು ಅಪಾಯಕಾರಿ ಎಂದು ಗೊತ್ತಾಗದ ಸ್ಥಳೀಯರು ಅರಳಿದ ಹೂವಿನ ಚೆಂದವನ್ನು ಕಣ್ತುಂಬಿಸಿಕೊAಡು ತಮ್ಮೂರಿನ ಕೆರೆಯ ಸೌಂದರ್ಯಕ್ಕೆ ಮನಸೋತಿದ್ದರು. ಕೆಲವರು ಇದರ ಗಿಡ ಕಿತ್ತುಕೊಂಡು ಹೋಗಿ ತಮ್ಮ ಮನೆ ಪಕ್ಕದ ಕೊಳ, ಬಾವಿಗಳಲ್ಲೂ ಹಾಕಿ ಅರಳಿದ ಹೂವು ನೋಡಿ ಖುಷಿಪಟ್ಟಿದ್ದರು. ಆದರೆ ಈ ಕೆರೆಯಲ್ಲಿ ಮೀನಿನ ಗುತ್ತಿಗೆ ತೆಗೆದುಕೊಂಡಿದ್ದವರಿಗೆ ಮಾತ್ರ ಆಘಾತ ಕಾದಿತ್ತು.

ಸಾಲ ಮಾಡಿ ಮಳೆಗಾಲದ ಸಂದರ್ಭ ಈ ಕೆರೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಬಿಟ್ಟಿದ್ದ ಮೀನು ಮರಿಗಳನ್ನು ಬೇಸಿಗೆಯಲ್ಲಿ ಹಿಡಿದು ಮಾರುಕಟ್ಟೆಗೆ ಕಳುಹಿಸುವುದು ಸಾಮಾನ್ಯ. ಆದರೆ ಬಲೆ ಬಿಡುವುದಕ್ಕೆ ಸಾಧ್ಯವಾಗದ ರೀತಿಯಲ್ಲಿ 'ಟೆರರ್ ಆಫ್ ಬಾಂಗ್ಲಾ' ಹೆಸರಿನ ಜಲಕಳೆ ಗಿಡ 'ವಾಟರ್ ಹಯಸಿಂತ್' ಕೆರೆ ತುಂಬಾ ಹರಡಿಕೊಂಡಿತ್ತು. ಹರಿಗೋಲನ್ನು ಕೂಡ ಇಳಿಸಲಾಗದ ಸ್ಥಿತಿ ನಿರ್ಮಾಣ ಆಗಿತ್ತು. ಕೆರೆಯೊಳಗೆ ಬಿಟ್ಟಿದ್ದ ಲಕ್ಷಾಂತರ ಮೀನು ಮರಿಗಳ ಕತೆ ಏನಾಯ್ತು ಎನ್ನುವುದು ಕೂಡ ಗೊತ್ತಾಗಿಲ್ಲ. ಸದಾ ತಾವರೆಗಳಿಂದ ತುಂಬಿರುತ್ತಿದ್ದ ಈ ಕೆರೆಯಲ್ಲಿ ತಾವರೆ ಗಿಡಗಳೂ ಮಾಯವಾಗಿದ್ದವು. ಆಗಲೇ ಸ್ಥಳೀಯರಿಗೆ ಈ ಗಿಡಕ್ಕೆ 'ಟೆರರ್ ಆಫ್ ಬಾಂಗ್ಲಾ' ಎನ್ನುವ ಹೆಸರು ಯಾಕೆ ಇದೆ ಎನ್ನುವುದರ ಅರಿವಾಗಿದ್ದು.

2021-22ನೇ ಸಾಲಿನಲ್ಲಿ ಮರಡಿಯೂರಿನ ಈ ಕೆರೆಗೆ ಮಹಾತ್ಮಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆ ಆಡಿಯಲ್ಲಿ ತಡೆಗೋಡೆ ನಿರ್ಮಿಸುವ ಸಂದರ್ಭ ಹೂಳೆತ್ತುವ ಕಾಮಗಾರಿಯನ್ನೂ ನಡೆಸಲಾಗಿತ್ತು. ಈ ವೇಳೆ 'ವಾಟರ್ ಹಸಿಂತ್' ಗಿಡ ತೆರವು ಕಾರ್ಯದ ಜತೆಗೆ ಸಂಪೂರ್ಣ ಕೆರೆಯನ್ನು ಸ್ವಚ್ಛಗೊಳಿಸಿ ಮುಂದಿನ ವರ್ಷದಿಂದ ಮತ್ತೆ ಮೀನುಗಾರಿಕೆ ಗುತ್ತಿಗೆ ಕೊಡುವ ಉದ್ದೇಶ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರದ್ದಾಗಿತ್ತು. ಸದ್ಯ ಈಗಲಾದರೂ ಕಳೆ ಗಿಡ ತೊಲಗಿತಲ್ಲ ಎಂದು ಮೀನುಗಾರಿಕೆಯ ಗುತ್ತಿಗೆದಾರರೂ ನಿಟ್ಟುಸಿರು ಬಿಟ್ಟಿದ್ದರು. ಆದರೆ ಈ ನೆಮ್ಮದಿ ಇದ್ದಿದ್ದು ಕೆಲ ದಿನ ಮಾತ್ರ.

ಮಳೆಗಾಲದಲ್ಲಿ ಕೆರೆ ತುಂಬುತ್ತಿದ್ದAತೆಯೇ ತೆರವುಗೊಳಿಸಿದ್ದಕ್ಕಿಂತ ಹೆಚ್ಚು ವೇಗದಲ್ಲಿ 'ವಾಟರ್ ಹಯಸಿಂತ್' ಗಿಡ ರಕ್ತ ಬೀಜಾಸುರನಂತೆ ಮತ್ತೆ ಕೆರೆಯನ್ನು ಆಕ್ರಮಿಸಿಕೊಂಡಿತು. ಹೂಳೆತ್ತುವ ಕಾಮಗಾರಿ ನಡೆಸಿ ಕಳೆ ತೊಲಗಿಸಿದೆವು ಎಂದು ಬೀಗುತ್ತಿದ್ದವರನ್ನು ಅಣಕಿಸಲು ಎಂಬAತೆ ನಂತರದ ಬೇಸಿಗೆಯಲ್ಲಿ ಪುನಃ ಕೆರೆ ತುಂಬಾ ನೀಲಿ ಬಣ್ಣದ 'ವಾಟರ್ ಹಸಿಂತ್' ಅರಳಿ ನಿಂತು 'ಟೆರರ್ ಆಫ್ ಬಾಂಗ್ಲಾ' ಹೆಸರು ಎಷ್ಟು ಅನ್ವರ್ಥಕ ಎನ್ನುವುದನ್ನು ಸಾಬೀತು ಪಡಿಸುತ್ತಿದ್ದಂತೆೆ ಕಂಡುಬರುತ್ತಿತ್ತು. ಅಲ್ಲಿಂದ ಈಚೆಗೆ ಆ ಕೆರೆ ನಿರುಪಯುಕ್ತವಾಗಿದೆ. ಅಲ್ಲೊಂದು ಕೆರೆ ಇತ್ತು ಎನ್ನುವುದನ್ನು ಮರೆಯುವಷ್ಟರ ಮಟ್ಟಿಗೆ ಈಗಲೂ ಸುಮಾರು 5 ಎಕರೆ ವಿಸ್ತೀರ್ಣದ ಆ ಕೆರೆ ತುಂಬಾ 'ವಾಟರ್ ಹಯಸಿಂತ್' ಹರಡಿ ನಿಂತಿದೆ.

ಮರಡಿಯೂರು ಸುತ್ತಲಿನ ಕೆರೆ, ಕೊಳಗಳ ಸ್ಥಿತಿಯೂ ಹೆಚ್ಚು ಕಡಿಮೆ ಇದೇ ರೀತಿ ಇದೆ. ವರ್ಷದಿಂದ ವರ್ಷಕ್ಕೆ ಸಾಧ್ಯವಿರುವ ಕಡೆಗೆಲ್ಲಾ 'ವಾಟರ್ ಹಯಸಿಂತ್' ಕಳೆ ವಿಸ್ತರಣೆ ಆಗುತ್ತಾ ಜಲಮೂಲಗಳನ್ನು ಹಾಳುಗೆಡುವುತ್ತಿದೆ. ಕೇರಳ ಭಾಗದಿಂದ ಯಾರೋ ಈ ಗಿಡವನ್ನು ತಂದು ಮರಡಿಯೂರಿನ ಕೆರೆಗೆ ಹಾಕಿದ ನಂತರ ಈ ರೀತಿಯಲ್ಲಿ ಅಲ್ಲಿ ವಿಸ್ತರಣೆ ಆಗುತ್ತಾ ಬಂದಿದೆ. ಕಳೆದ 10 ವರ್ಷಗಳಿಂದ ಈ ಕಳೆಗಿಡ ನಿರ್ಮೂಲನೆ ಮಾಡಲು ಪ್ರಯತ್ನ ನಡೆಸುತ್ತಿದ್ದರೂ ವ್ಯಾಪ್ತಿ ಬೆಳೆಯುತ್ತಲೇ ಇದೆ ಎನ್ನುತ್ತಾರೆ ಸ್ಥಳೀಯರು.

ಇದೀಗ ಮರಡಿಯೂರಿನಿಂದ ಸುಮಾರು 8 ಕಿಮೀ ದೂರದ ಕುಶಾಲನಗರ ತಾವರೆಕೆರೆಯಲ್ಲಿ 'ಟೆರರ್ ಆಫ್ ಬಾಂಗ್ಲಾ' ತನ್ನ ಜಾಲ ಹರಡಿದೆ. ರಾಷ್ಟಿçÃಯ ಹೆದ್ದಾರಿ 275ರ ಬದಿಯಲ್ಲೇ ಈ ಕೆರೆ ಇರುವುದರಿಂದ ಸಹಜವಾಗಿ ಜನರನ್ನು ಆಕರ್ಷಿಸುತ್ತಿದೆ. ಈ ಮಾರ್ಗದಲ್ಲಿ ಸಾಗುವವರು ಹೂವಿನ ಸೌಂದರ್ಯಕ್ಕೆ ಮನಸೋತು ಒಂದಿಷ್ಟು ಹೊತ್ತು ಇದನ್ನು ವೀಕ್ಷಿಸಿ, ಫೋಟೋ ತೆಗೆದು, ಸೆಲ್ಫಿ ಕ್ಲಿಕ್ಕಿಸಿ ತೆರಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಇಲ್ಲಿಯ ಹೂವಿನ ದೃಶ್ಯ ವೈರಲ್ ಆಗಿದೆ. ಆದರೆ ಕೆಲವರು ಇಲ್ಲಿಂದ 'ವಾಟರ್ ಹಯಸಿಂತ್' ಗಿಡ ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಸ್ವಲ್ಪ ನೀರಿನಂಶ ಇದ್ದರೂ ಸಾಕು ಜೀವ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇರುವ 'ವಾಟರ್ ಹಯಸಿಂತ್' ಜಲಮೂಲಗಳಲ್ಲಿ ಅತ್ಯಂತ ವೇಗವಾಗಿ ಹರಡಬಲ್ಲದು. ಸಂಪೂರ್ಣ ಕೆರೆಯನ್ನು ನಾಶಮಾಡಲು ಈ ಗಿಡದ ಒಂದು ಬೇರು ಸಾಕು ಎನ್ನುವುದು ಈಗಾಗಲೇ ಹಲವೆಡೆ ಸಾಬೀತಾಗಿದೆ. ಹಾಗಾಗಿ ಮೊದಲು ತಾವರೆಕೆರೆಯಿಂದ 'ವಾಟರ್ ಹಯಸಿಂತ್' ಗಿಡಗಳನ್ನು ತೆಗೆದುಕೊಂಡು ಹೋಗುವುದಕ್ಕೆ ನಿರ್ಬಂಧ ಹೇರುವ ಅಗತ್ಯ ಇದೆ ಎನ್ನುವ ಪರಿಸರ ಪ್ರೇಮಿಗಳು. ಇದರ ಜತೆಗೆ ತಾವರೆಕೆರೆಯಿಂದ ಈ ಗಿಡಗಳನ್ನು ನಾಶ ಮಾಡಿ ಕುಶಾಲನಗರದ ಐತಿಹಾಸಿಕ ಕೆರೆ ರಕ್ಷಿಸುವ ಅಗತ್ಯತೆ ಬಗ್ಗೆ ಒತ್ತು ನೀಡುತ್ತಾರೆ.

'ಟೆರರ್ ಆಫ್ ಬಾಂಗ್ಲಾ'ದಿAದಾಗಿ ಕುಶಾಲನಗರ ಮರಡಿಯೂರಿನ ಕೆರೆಯೊಂದು ನಿರ್ಜೀವ ಆಗಿರುವ ಉದಾಹರಣೆ ಇರುವಾಗ ತಾವರೆಕೆರೆ ರಕ್ಷಣೆಗೆ ವೈಜ್ಞಾನಿಕ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಒಮ್ಮೆ ಕಿತ್ತರೆ ಮತ್ತೆ ಹುಟ್ಟಿಕೊಳ್ಳುವ ಗುಣ ಹೊಂದಿರುವ 'ವಾಟರ್ ಹಯಸಿಂತ್' ಗಿಡದ ಶಾಶ್ವತ ನಿರ್ಮೂಲನೆಯ ದಾರಿ ಬಗ್ಗೆ ಚಿಂತನೆ ಹರಿಸಬೇಕಿದೆ ಎನ್ನುವ ಒತ್ತಾಯ ಕೇಳಿ ಬರುತ್ತಿದೆ.

ತಾವರೆಕೆರೆಯಿಂದ ದಯವಿಟ್ಟು ಯಾರು ಕೂಡ 'ವಾಟರ್ ಹಯಸಿಂತ್' ಗಿಡ ನಿಮ್ಮ ಜತೆ ತೆಗೆದುಕೊಂಡು ಹೋಗ ಬೇಡಿ. ಇದು ಒಮ್ಮೆ ಜಲಮೂಲಗಳಲ್ಲಿ ಕಾಣಿಸಿಕೊಂಡರೆ ಯಾವುದೇ ಕಾರಣಕ್ಕೂ ನಾಶ ಮಾಡಲು ಆಗುವುದಿಲ್ಲ. ನಮ್ಮೂರಿನ ಕೆರೆಯಲ್ಲಿ ಹುಟ್ಟಿಕೊಂಡಿರುವ ಈ ಕಳೆ ತೆಗೆಯಲು ಕಳೆದ 10 ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಈ ಗಿಡದಿಂದಾಗಿ ನಮ್ಮ ಗ್ರಾಮದ 5 ಎಕರೆ ವಿಸ್ತೀರ್ಣದ ಸಂಪೂರ್ಣ ಕೆರೆಯೇ ನಿರುಪಯುಕ್ತವಾಗಿದೆ. ಹಾಗಾಗಿ ತಾವರೆಕೆರೆ ಉಳಿವಿನ ಬಗ್ಗೆ ಕುಶಾಲನಗರ ಸ್ಥಳೀಯ ಆಡಳಿತ ಗಂಭೀರ ಚಿಂತನೆ ಮಾಡಬೇಕು.

ಶಿವು, ಗ್ರಾ.ಪಂ. ಸದಸ್ಯ, ಮರಡಿಯೂರು

ತಾವರೆಕೆರೆಯಲ್ಲಿ ಕಾಣಿಸಿಕೊಂಡಿರುವ 'ವಾಟರ್ ಹಯಸಿಂತ್' ಗಿಡದಿಂದ ಪರಸರದ ಮೇಲೆ ಆಗುವ ಸಮಸ್ಯೆ ಬಗ್ಗೆ ಹಲವರು ನಮ್ಮ ಗಮನಕ್ಕೆ ತಂದಿದ್ದಾರೆ. ಈ ವಿಷಯವನ್ನು ತೋಟಗಾರಿಕೆ ಇಲಾಖೆಗೆ ಪತ್ರ ಮುಖಾಂತರ ತಿಳಿಸಲಾಗಿದೆ. ಅಲ್ಲಿಂದ ಬರಲಿರುವ ವರದಿಗಾಗಿ ನಿರೀಕ್ಷೆ ಮಾಡಲಾಗುತ್ತಿದೆ. ವರದಿ ಬಂದ ನಂತರ ತಾವರೆ ಕೆರೆ ರಕ್ಷಣೆಗೆ ಅಗತ್ಯವಿರುವ ಕ್ರಮ ತೆಗೆದುಕೊಳ್ಳಲಾಗುವುದು.

ಟಿ.ಎಸ್. ಗಿರೀಶ್, ಮುಖ್ಯಾಧಿಕಾರಿ, ಪುರಸಭೆ, ಕುಶಾಲನಗರ