ತಾವರಗೇರಾ: ಕನ್ನಡ ಸಾಹಿತ್ಯ ಭವನದ ಕಟ್ಟಡದಲ್ಲಿ ಕೇವಲ ಸಾಹಿತ್ಯಿಕ ಚಟುವಟಿಕೆಗಳಷ್ಟೇ ಅಲ್ಲದೆ, ಸಾರ್ವಜನಿಕರಿಗೆ ಬಾಡಿಗೆಗೂ ಕೊಡಬಹುದು. ಬರುವ ಆದಾಯದಲ್ಲಿ ಭವನದ ನಿರ್ವಹಣೆಗೆ ಅನುಕೂಲವಾಗಲಿದೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಭವನದ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಸಂಸದರ ನಿಧಿಯಿಂದ ಮೂರು ಲಕ್ಷ ರೂ. ಕೆಶಿಪ್ ರಸ್ತೆ ನಿರ್ಮಾಣ ಮಾಡಿದ ಏಜೆನ್ಸಿಯಿಂದ ಮೂರು ಲಕ್ಷ ರೂ., ಕನ್ನಡ ಸಾಹಿತ್ಯ ಪರಿಷತ್‌ನಿಂದ ನಾಲ್ಕು ಲಕ್ಷ ರೂ.ಯಿಂದ ಭವನ ನಿರ್ಮಾಣಗೊಂಡಿದೆ. ಅಗತ್ಯ ಸೌಕರ್ಯಗಳಿಗಾಗಿ ಇನ್ನೂ ಐದು ಲಕ್ಷ ರೂ. ನೀಡುತ್ತೇನೆ. ಅದರಲ್ಲಿ ಕುಡಿವ ನೀರು, ವಿದ್ಯುತ್ ಸಂಪರ್ಕ, ಶೌಚಗೃಹ, ಆವರಣ ಗೋಡೆ ನಿರ್ಮಾಣ ಮಾಡಬಹುದು ಎಂದರು.
ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಮಾತನಾಡಿ, ರಾಜ್ಯದ ಕೆಲವೆಡೆ ಜಿಲ್ಲಾ ಕೇಂದ್ರದಲ್ಲಿ ಮಾತ್ರ ಸಾಹಿತ್ಯ ಭವನಗಳು ಇವೆ. ಆದರೆ ಇಡೀ ರಾಜ್ಯದಲ್ಲಿ ಕುಷ್ಟಗಿ ತಾಲೂಕೊಂದರಲ್ಲೇ ಮೂರು ಸಾಹಿತ್ಯ ಭವನಗಳಿವೆ. ತಾವರಗೇರಾ, ಗುಮಗೇರಿ, ಹನುಮಸಾಗರದಲ್ಲಿ ಒಂದೇ ಬಾರಿಗೆ ಭವನಗಳು ಉದ್ಘಾಟನೆಗೊಂಡಿವೆ. ಪ್ರತಿ ಸಾಹಿತ್ಯ ಭವನದಲ್ಲೂ ಗ್ರಂಥಾಲಯ ಆಗಬೇಕು. ಇದಕ್ಕೆ ಪಂಚಾಯಿತಿ ಸಹಕಾರ ಮುಖ್ಯ ಎಂದರು.