ತಾವರಗೇರಾ ಸಮೀಪದ ವಿಠಲಾಪೂರ ಮತದಾರರ ಜತೆ ತಹಸೀಲ್ದಾರ್ ರವಿ ಅಂಗಡಿ, ಸಿಪಿಐ ಯಶವಂತ ಬಿಸನಳ್ಳಿ ಮಾತನಾಡಿದರು. ಪಿಎಸ್‌ಐ ಸುಜಾತಾ ನಾಯಕ, ಉಪ ತಹಸೀಲ್ದಾರ್ ಮುರಳೀಧರ, ನಾಡ ತಹಸೀಲ್ದಾರ್ ಪ್ರಕಾಶ, ಆರ್‌ಐ ಶರಣಪ್ಪ, ಗ್ರಾಮ ಲೆಕ್ಕಿಗ ಸೂರ್ಯಕಾಂತ, ಕಳಕನಗೌಡ, ಅಮರೇಶಪ್ಪ, ಶಂಕ್ರಪ್ಪ ಇತರರಿದ್ದರು.  
ಜಿಲ್ಲೆ

ವೈದ್ಯಾಧಿಕಾರಿ ಅಮಾನತು ಮಾಡದಿದ್ದರೆ ಮತದಾನ ಬಹಿಷ್ಕಾರ

ತಾವರಗೇರಾ: ಪಟ್ಟಣದ ಆಸ್ಪತ್ರೆಗೆ ಹೆರಿಗೆಗೆ ಬಂದಿದ್ದ ವಿಠಲಾಪೂರದ ಗರ್ಭಿಣಿ ವೈದ್ಯರ ನಿರ್ಲಕ್ಷೃದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಗ್ರಾಮಸ್ಥರು ಲೋಕಸಭೆ ಚುನಾವಣೆ ಬಹಿಷ್ಕಾರ ನಿರ್ಧಾರ ಮಾಡಿದ್ದರು. ಈ ವಿಷಯ ತಿಳಿದ ತಹಸೀಲ್ದಾರ್ ರವಿ ಅಂಗಡಿ ಹಾಗೂ ಸಿಪಿಐ ಯಶವಂತ ಬಿಸನಳ್ಳಿ ನೃತೃತ್ವದ ತಂಡ ಶನಿವಾರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಕೆಗೆ ಮುಂದಾಯಿತು.

ಅಧಿಕಾರಿಗಳ ಮಾತಿಗೆ ಮಣಿಯದ ಗ್ರಾಮಸ್ಥರು, ಏ.30ರಂದು ರಾತ್ರಿಯೇ ಗರ್ಭಿಣಿ ಮೃತಪಟ್ಟಿದ್ದರೂ ವೈದ್ಯಾಧಿಕಾರಿ ವಿರುದ್ಧ ಯಾವುದೇ ಕ್ರಮವಾಗಿಲ್ಲ. ಈ ಕಾರ್ಯವಾಗದ ಹೊರತು ನಾವು ಮತದಾನ ಮಾಡುವುದಿಲ್ಲ ಎಂದು ಪಟ್ಟುಹಿಡಿದರು.

ತಹಸೀಲ್ದಾರ್ ರವಿ ಅಂಗಡಿ ಮಾತನಾಡಿ, ಚುನಾವಣೆ ನೀತಿ ಸಂಹಿತೆ ಜಾರಿ ಇರುವ ಕಾರಣ ಯಾವುದೇ ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಬರುವುದಿಲ್ಲ. ಮತದಾನ ಬಳಿಕ ವೈದ್ಯಾಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ. ತಾವೆಲ್ಲರೂ ಸಂವಿಧಾನ ಕಲ್ಪಿಸಿರುವ ಮತದಾನದ ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಸಹರಿಸಿ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮಸ್ಥರು, ವೋಟಿಂಗ್ ದಿನ ಬರುವ ಚುನಾವಣಾ ಸಿಬ್ಬಂದಿಗೆ ನಾವೇ ಬೇಗಾದರು ಊಟೋಪಚಾರದ ವ್ಯವಸ್ಥೆ ಮಾಡುತ್ತೇವೆ. ಆದರೆ ವೈದ್ಯಾಥಿಕಾರಿ ವಿರುದ್ಧ ಕ್ರಮ ಕೈಗೊಳ್ಳದ ಹೊರತು ನಾವು ವೋಟ್ ಮಾಡುವುದಿಲ್ಲ. ಜಿಲ್ಲಾಧಿಕಾರಿ ಸ್ಥಳಕ್ಕಾಗಮಿಸಿ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ಪಟ್ಟುಹಿಡಿದರು. ಯಾವುದೇ ಮನವೊಲಿಕೆಗೆ ಬಗ್ಗದ ಕಾರಣ ತಹಸೀಲ್ದಾರ್ ಇತರ ಸಿಬ್ಬಂದಿ ಬಂದ ದಾರಿಕೆ ಸುಂಕವಿಲ್ಲದಂತೆ ತೆರಳಿದರು.

ತಾವರಗೇರಾ ಪಿಎಸ್‌ಐ ಸುಜಾತಾ ನಾಯಕ, ನಾಡ ತಹಸೀಲ್ದಾರ್ ಪ್ರಕಾಶ, ಉಪತಹಸೀಲ್ದಾರ್ ಮುರಳೀಧರ, ಕಂದಾಯ ನಿರೀಕ್ಷಕ ಶರಣಪ್ಪ, ಸೂರ್ಯ ಕಾಂತ , ಜೆಸ್ಕಾಂನ ಸೆಕ್ಷನ್ ಜೆಇ ರಶ್ಮಿ ಚವ್ಹಾಣ, ಮುಖ್ಯಾಧಿಕಾರಿ ನಬಿಸಾಬ ಖುದನವರ, ಗ್ರಾಮದ ಹಿರಿಯರಾದ ಅಮರೇಶಪ್ಪ ರಡ್ಡೇರ, ವಕೀಲ ಕಳಕನಗೌಡ ಪಾಟೀಲ, ಶಂಕ್ರಪ್ಪ ರೋಣದ, ಈಶಪ್ಪ ರೋಣದ, ಕನಕಪ್ಪ ಬನ್ನೇರಿ, ಶರಣಯ್ಯ ಹಿರೇಮಠ, ದೇವೇಂದ್ರಪ್ಪ ಗುರಿಕಾರ ಇತರರಿದ್ದರು.