ತಾವರಗೇರಾ: ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್‌ನ ವಿಕ್ರಮ್ ರಾಯ್ಕರ್, ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಹಂಪಮ್ಮ ಕೈಲವಾಡಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನ ಬಿಸಿಎಗೆ ಮೀಸಲಾಗಿದ್ದರೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ವಿಕ್ರಮ ರಾಯ್ಕರ್, ಬಿಜೆಪಿಯ ಚನ್ನಪ್ಪ ಸಜ್ಜನ್ ನಾಮ ಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಶಾಂತಲಾ ಮುಖಿಯಾಜೀ ಮತ್ತು ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಹಂಪಮ್ಮ ಕೈಲವಾಡಗಿ ನಾಮಪತ್ರ ಸಲ್ಲಿಸಿದ್ದರು. ಒಟ್ಟು 18 ಸದಸ್ಯ ಬಲದಲ್ಲಿ 11 ಕಾಂಗ್ರೆಸ್, ಬಿಜೆಪಿಯ 6 ಸದಸ್ಯರು ಇದ್ದು, ಒಬ್ಬರು ಪಕ್ಷೇತರ ವಾಗಿ ಗೆದ್ದಿದ್ದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ 11 ಜನ ಕಾಂಗ್ರೆಸ್ ಸದಸ್ಯರು, ಓರ್ವ ಪಕ್ಷೇತರ ಸದಸ್ಯೆ, ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ತಮ್ಮ ಮತ ಚಲಾಯಿಸಿದ್ದು, ಬಿಜೆಪಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಳಿಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ಬಿಜೆಪಿಯ 6 ಜನ ಸದಸ್ಯರು ಮತ ಚಲಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ವಿಕ್ರಮ್ ರಾಯ್ಕರ್ ಅಧ್ಯಕ್ಷ, ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಹಂಪಮ್ಮ ಕೈಲವಾಡಗಿ ಉಪಾಧ್ಯಕ್ಷ ರಾಗಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ನಿರ್ವಹಣಾಧಿಕಾರಿಯಾಗಿ ಆಗಮಿಸಿದ್ದ ಕುಷ್ಟಗಿ ತಹಸೀಲ್ದಾರ್ ಸಿದ್ಧೇಶ ಘೋಷಣೆ ಮಾಡಿದರು. ಪಪಂ ಮುಖ್ಯಾಧಿಕಾರಿ ಶಂಕರ್ ಕಾಳೆ ಉಪಚುನಾವಣಾಧಿಕಾರಿಯಾಗಿ ಕೆಲಸ ನಿರ್ವಹಿಸಿದರು. ಪಿಎಸ್‌ಐ ಗೀತಾಂಜಲಿ ಶಿಂಧೆ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.