ತಾವರಗೇರಾ: ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಹೋರಾಟಗಳನ್ನು ಮಾಡಿದಾಗ ಜನರ ವಿರೋಧಿ ರಾಜಕಾರಣ ಸೋಲಿಸಬಹುದು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಹೇಳಿದರು.
ಪಟ್ಟಣದ ಹೊರ ವಲಯದ ಬುದ್ಧ ವಿಹಾರದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ (ಯುವ ಪಡೆ) ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪರಿಸರ ಜಾಗೃತಿ ಅಧ್ಯಯನ ಶಿಬಿರದಲ್ಲಿ ಮಾತನಾಡಿದರು. ನ್ಯಾಯ ಪಡೆಯಲು ತಾಳ್ಮೆ ಬೇಕು. ಸಾರ್ವಜನಿಕ ವಿಚಾರಣೆ ಕರೆಯದೆ ಯಾವುದೇ ಕಾರ್ಖಾನೆಗಳನ್ನು ಹಾಕುವಂತಿಲ್ಲ. ಇದು ಕಾನೂನಲ್ಲಿದೆ. ಇದನ್ನು ಉಲ್ಲಂಘನೆ ಮಾಡಿ ಕೈಗಾರಿಕೆಗಳನ್ನು ಸ್ಥಾಪಿಸಲಾಗಿದೆ. ಅಲ್ಲಿನ ರಸ್ತೆಗಳಲ್ಲಿ ಸುರಕ್ಷಿತ ಪ್ರಯಾಣ ಮಾಡಲು ಸಾಧ್ಯವಿಲ್ಲ. ಸಂಘಟನೆಯಲ್ಲಿ ವೈಚಾರಿಕ ಬದ್ಧತೆ ಇಟ್ಟುಕೊಂಡು ಹೋರಾಟ ಮಾಡಬೇಕು ಎಂದರು.
ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಪ್ಪಳದಲ್ಲಿ ಕೇಂದ್ರೀಕೃತ ಕಾರ್ಖಾನೆ ನೀತಿಯಿಂದಾಗಿ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಅಲ್ಲೊಂದು ಇಲ್ಲೊಂದು ಜನ ವಸತಿ ಪ್ರದೇಶದಿಂದ ಕೈಗಾರಿಗಳು ದೂರ ಇರಲಿ. ಆದರೆ ಕೊಪ್ಪಳ ಜಿಲ್ಲೆಯ ಗಿಣಿಗೇರಿ, ಅಲ್ಲಾನಗರ, ಹಳೆಕನಕಾಪುರ, ಬೇವಿನಹಳ್ಳಿ, ಹಿರೇಬಗನಾಳ, ಹಿರೇಕಾಸನಕಂಡಿ, ಹಾಲವರ್ತಿ, ಚಿಕ್ಕಬಗನಾಳ, ಕುಣಿಕೇರಿ, ಲಾಚನಕೇರಿ, ಕುಣಿಕೇರಿ ತಾಂಡಾ ಮುಂತಾದ 20ಕ್ಕಿಂತ ಹೆಚ್ಚು ಹಳ್ಳಿಗಳು ಕಾರ್ಖಾನೆಗಳ ಹೊಗೆ, ದೂಳಿನಿಂದ ಬಾಧಿತವಾಗಿವೆ. ಜನರ ಜೀವನ ಸಂಕಷ್ಟದಲ್ಲಿದೆ. ರೈತರ ಕೃಷಿಬೆಳೆ ಹಾಳಾಗಿವೆ. ಬೂದಿ ಹೊಗೆ ತಾಗಿದ ಮೇವು ತಿಂದು ದನಗಳು ಅತಿಸಾರದಿಂದ ಸಾಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಸರಕಾರ ನೇಮಿಸಿದ ತಾಂತ್ರಿಕ ಸಮಿತಿ ವರದಿ ಒಂದು ತಾಸು ಓದಿದರೆ ಸಾಕು. ಮತ್ತೆ ಅಧ್ಯಯನ ಮಾಡಲಾಗುವುದು ಎನ್ನುವುದು ಕಾಲಹರಣವಾಗುತ್ತದೆ. ಬಾಧಿತ ಪ್ರದೇಶದಲ್ಲಿ ಕೈಗಾರಿಕಾ ಮಂತ್ರಿಗಳು ಸಂಚರಿಸಿ ನೋಡಿದರೆ ಮೇಲ್ನೋಟಕ್ಕೆ ಪರಿಸರ ಮಾಲಿನ್ಯ ಇರುವುದು ಗೊತ್ತಾಗಲಿದೆ. ಕೊಪ್ಪಳದ ಜಿಲ್ಲಾ ಕಚೇರಿ, ಜಿಲ್ಲಾ ಆಸ್ಪತ್ರೆ, ಮೆಡಿಕಲ್ ಕಾಲೇಜು, ಗವಿಮಠ, ಗವಿಶ್ರೀ ನಗರ, ಕಾಳಿದಾಸನಗರ, ಬೇಲ್ದಾರ್ ಕಾಲನಿ, ಸಿದ್ದಾರ್ಥ ನಗರ ಮುಂತಾದ ಪ್ರದೇಶಗಳು ಈಗಾಗಲೇ ಬಾಧಿತವಾಗಿವೆ. ಬಲ್ದೋಟ ಬಿಎಸ್‌ಪಿಎಲ್ ವಿಸ್ತರಣೆಯಿಂದ ಕೊಪ್ಪಳ ನಗರ ಮತ್ತು ಇಪ್ಪತ್ತು ಹಳ್ಳಿಗಳನ್ನು ಸ್ಥಳಾಂತರಿಸಬೇಕಾಗುತ್ತದೆ. ಕೊಪ್ಪಳ ಜಿಲ್ಲೆಯ ಪರಿಸರ ಉಳಿಯಬೇಕಾದರೆ ಈಗಿರುವ ಕಾರ್ಖಾನೆಗಳು ಹೊಸ ತಂತ್ರಜ್ಞಾನ ಬಳಸಿ ಹೊಗೆ, ಬೂದಿ ಜನರನ್ನು ಬಾಧಿಸದಂತೆ ಮಾಡಬೇಕು. ಕೊಪ್ಪಳ ಇರಬೇಕು ಇಲ್ಲವೇ ಬಿಎಸ್‌ಪಿಎಲ್ ಇರಬೇಕು. ಎರಡೂ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂಬುದನ್ನು ಸಚಿವರು ಮನಗಾಣಬೇಕು ಎಂದರು.
ಇದಕ್ಕೂ ಮುನ್ನ ಶಿಬಿರವನ್ನು ಕಾರ್ಖಾನೆಗಳ ಬಾಧಿತರ ಮಕ್ಕಳು ಉದ್ಘಾಟಿಸಿದರು. ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಂಚಾಲಕ ಕೆ.ಬಿ. ಗೋನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮುಖರಾದ ಮುದುಕಪ್ಪ ಎಂ. ಹೊಸಮನಿ, ಮಹಾಂತೇಶ ಕೊತಬಾಳ, ಶುಕರಾಜ ತಾಳಕೇರಿ, ಮದ್ದಾನಯ್ಯ ಹಿರೇಮಠ, ಮಾನವ ಬಂಧುತ್ವ ವೇದಿಕೆ ಮಹಿಳಾ ಸಂಚಾಲಕಿ ಆದ ಶಶಿಕಲಾ, ಕೊಜಿಬ ಆಂದೋಲನ ಸಂಚಾಲಕರಾದ ಡಿ.ಎಚ್. ಪೂಜಾರ, ಟಿ ರತ್ನಾಕರ ಶರಣು ಗಡ್ಡಿ, ನಜೀರಸಾಸಾಬ್ ಮೂಲಿಮನಿ, ಎಸ್.ಎ.ಗಫಾರ್, ಶರಣು ಶೆಟ್ಟರ್, ಎಂ.ಕೆ.ಸಾಹೇಬ, ಶರಣು ಪಾಟೀಲ , ಶರಣು ಗಡ್ಡಿ, ರಾಮಣ್ಣ ಬೇರಗಿ ಇನ್ನಿತರರಿದ್ದರು.
ತುಂಗಭದ್ರಾ ರಕ್ಷಣೆಗೆ ನಾವೆಲ್ಲ ಮುಂದಾಗಬೇಕಿದೆ. ಕೊಪ್ಪಳ ಮಾತ್ರವಲ್ಲ ಸಮಸ್ಯೆಯಾಗುತ್ತಿಲ್ಲ. ಪಕ್ಕದ ರಾಯಚೂರು ಜಿಲ್ಲೆಯ ಆರ್‌ಟಿಪಿಎಸ್ ಮೃತ್ಯು ಚಿನ್ನದ ಗಣಿಗಾರಿಕೆಯಿಂದ ಸಿಲಿಕೋಸಿಸ್ ಕಾಯಿಲೆಗೆ ತುತ್ತಾಗುವಂತಾಗಿದೆ. ಇದಕ್ಕೆ ಚಿಕಿತ್ಸೆ ಮಧ್ಯಪ್ರದೇಶ ಹಾಗೂ ಎಐಐಎಂಎಸ್‌ನಲ್ಲಿ ಮಾತ್ರ ಸಿಗುತ್ತದೆ.
ರಾಘವೇಂದ್ರ ಕುಷ್ಟಗಿ
ಜನ ಸಂಗ್ರಾಮ ಪರಿಷತ್ ಸಂಸ್ಥಾಪಕ ಅಧ್ಯಕ್ಷ