ತಾವರಗೇರಾ: ಸ್ಥಳೀಯ ಪೊಲೀಸ್ ಠಾಣೆಯ ಸಿಬ್ಬಂದಿ ಯಮರಾಜ ಹಾಗೂ ಯಮಧೂತ ವೇಷದಲ್ಲಿ ಸಾರ್ವಜನಿಕರಿಗೆ ಕರೊನಾ ತಡೆಯುವ ಹಿನ್ನೆಲೆಯಲ್ಲಿ ಮಂಗಳವಾರ ಜಾಗೃತಿ ಮೂಡಿಸಿದರು.
ಮಹಾಮಾರಿಯಾದ ಕರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಪ್ರತಿಯೊಬ್ಬರೂ ಮನೆಯಲ್ಲಿ ಇರುವಂತೆ ಸೂಚಿಸಿದೆ. ಆದರೆ, ಜನರು ಮಾತ್ರ ಇದನ್ನು ಲೆಕ್ಕಿಸದೆ ಬೀದಿಗೆ ಬರುತ್ತಲೇ ಇದ್ದಾರೆ. ಪೊಲೀಸ್ ಇಲಾಖೆಯ ಹಲವು ಕ್ರಮಗಳ ಬಳಿಕವೂ ಎಚ್ಚ್ಚೆತ್ತುಕೊಳ್ಳದ ಜನರಿಗಾಗಿ ಸ್ಥಳೀಯ ಠಾಣೆ ರೂಪಕಗಳ ಮೂಲಕ ಜಾಗೃತಿಗೆ ಮುಂದಾಯಿತು. ಲಾಕ್‌ಡೌನ್ ಇದ್ದರೂ ಹೊರ ಬರುವ ಜನರನ್ನು ಯಮ ಹೇಗೆ ಕರೆದುಕೊಂಡು ಹೋಗುತ್ತಾನೆ ಎಂಬುದನ್ನು ಪ್ರದರ್ಶನ ಮೂಲಕ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರು.
ಈ ಸಂದರ್ಭ ಹೊರಗೆ ಬಂದ ವಾಹನ ಸವಾರರಿಗೆ ಸುತ್ತುವರೆದು ಮನೆಯಲ್ಲೇ ಇರುವಂತೆ ಮನವಿ ಮಾಡಿದರು. ದಾರಿಯುದ್ದಕ್ಕೂ ಕಂಡು ಬಂದ ಜನರಿಗೆ ಮುತ್ತಿಗೆ ಹಾಕಿ ಕರೊನಾ ವೈರಸ್ ಹೋಗಲಾಡಿಸಲು ಸಹಕಾರ ನೀಡಬೇಕು ಮತ್ತು ನೀವು ಜಾಗೃತರಾಗಬೇಕು ಎಂದು ಪೊಲೀಸ್ ಸಿಬ್ಬಂದಿ ಮನವಿ ಮಾಡಿದರು.
ಜಾಗೃತಿ ಜಾಥಾ ಹಳೇ ಬಸ್ ನಿಲ್ದಾಣ, ಶ್ಯಾಮೀದ ಅಲಿ ಸರ್ಕಲ್, ಪಟ್ಟಣ ಪಂಚಾಯಿತಿ, ಕುಂಬಾರ ಓಣಿ ಮೂಲಕ ಸಿಂಧನೂರ ಸರ್ಕಲ್ ತಲುಪಿತು. ಸ್ಥಳೀಯ ಠಾಣೆಯ ಪಿಎಸೈ ಗೀತಾಂಜಲಿ ಶಿಂಧೆ ನೇತೃತ್ವದಲ್ಲಿ ವಿಶೇಷ ಪಾತ್ರಗಳನ್ನು ಆಯೋಜಿಸಿದ್ದು, ಸಿಬ್ಬಂದಿಯಾದ ಎಎಸ್‌ಐ ಮಲ್ಲಪ್ಪ ಯಮರಾಜನ ವೇಷ ಧರಿಸಿದ್ದರು. ನಾಲ್ವರು ಪೇದೆಗಳಾದ ಚಂದ್ರು, ವಿರುಪಾಕ್ಷಿ, ಬಸವರಾಜ, ಶಿವಪುತ್ರಪ್ಪ, ಯಮಧೂತರ ವೇಷ ಧರಿಸಿದ್ದರು. ಒಬ್ಬರು ಶೂರಪಾನಕಿ ವೇಷದಲ್ಲಿದ್ದರು.
ಇದಕ್ಕೂ ಮುನ್ನ ಪಟ್ಟಣದ ಸಿಂಧನೂರ ವೃತ್ತದಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮಕ್ಕೆ ಪಿಎಸೈ ಗೀತಾಂಜಲಿ ಶಿಂಧೆ ಚಾಲನೆ ನೀಡಿದರು. ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಕಾವೇರಿ ಶ್ಯಾವಿ, ಪಪಂ ಮುಖ್ಯಾಧಿಕಾರಿ ಶಂಕರ ಕಾಳೆ ಮತ್ತು ಸಿಬ್ಬಂದಿ ಇದ್ದರು.