ಮಹಾಲಿಂಗಪುರ: ಸ್ಥಳೀಯ ಸಿ.ಎಂ. ಹುರಕಡ್ಲಿ ಫೌಂಡೇಷನ್, ಹೊಳೆಮಠದ ಐರಣಿ ಮಹಾಸಂಸ್ಥಾನ ಆಶ್ರಯದಲ್ಲಿ ದಾವಣಗೆರೆ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಬಸವನಗರದ ಬಸವೇಶ್ವರ ಸಮುದಾಯ ಭವನದಲ್ಲಿ ಇತ್ತೀಚೆಗೆ ಮಳೆಯರಿಗೆ ಉಚಿತ ಸ್ವಯಂ ಉದ್ಯೋಗ ತರಬೇತಿಯ 255ನೇ ಶಿಬಿರದ ಅಲ್ಪಾವಧಿ ತರಬೇತಿಗಳ ಸಮಾರೋಪ, ದೀರ್ಘಾವಧಿ ತರಬೇತಿಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಶಿಬಿರಾರ್ಥಿಗಳಾದ ಸೌಖ್ಯ ಪಟ್ಟಣಶೆಟ್ಟಿ, ಅಕ್ಷತಾ ನರಗಟ್ಟಿ, ರಮ್ಯಾ ಕಬ್ಬೂರ, ಮಹಾನಂದಾ ಅಳ್ಳಿಮಟ್ಟಿ, ಮಂಜುಳಾ ಬಂದಕ್ಕನವರ, ರಾಜೇಶ್ವರಿ ಲಮಾಣಿ ಮಾತನಾಡಿ, ತಂದೆ, ತಾಯಿ, ಗಂಡ, ಮಕ್ಕಳೊಂದಿಗೆ ಸಂತಸದಿಂದ ಬದುಕುವ ಸಂಸ್ಕಾರದ ಜೊತೆ ಅವರಿಗೆ ಆರ್ಥಿಕ ಸಹಾಯ ಮಾಡುವಷ್ಟರ ಮಟ್ಟಿಗೆ ನಾವು ಯಶಸ್ಸು ಕಂಡಿದ್ದೇವೆ ಎಂದರು.
ತರಬೇತುದಾರ ಎಂ. ಗುಡ್ಡಪ್ಪ ಅವರು ನೀಡುತ್ತಿರುವ ಸ್ವಯಂ ಉದ್ಯೋಗ ಉಚಿತ ತರಬೇತಿಯಲ್ಲಿ ಪಡೆದ ಕೌಶಲ, ಮಾನವೀಯ ಮೌಲ್ಯ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿಯಿಂದ ಬದುಕಿನಲ್ಲಿ ಭರವಸೆ ಮೂಡಿದೆ ಎಂದು ತಿಳಿಸಿದರು.
ಗಣ್ಯರಾದ ಶ್ರೀಶೈಲಪ್ಪ ಉಳ್ಳಾಗಡ್ಡಿ ಮಾತನಾಡಿ, ತಮ್ಮ ಸ್ವಂತ ಖರ್ಚಿನಲ್ಲೇ ಬಡವರಿಗೆ ಉಚಿತ ನೇತ್ರ ಚಿಕಿತ್ಸೆ, ಕೈಕಾಲು ಜೋಡಣೆ, ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ಸೇರಿ ನಿರಂತರ ಸಮಾಜ ಸೇವೆಯಲ್ಲಿ ತೊಡಗಿರುವ ಪುರಸಭೆ ಮಾಜಿ ಉಪಾಧ್ಯಕ್ಷ ಚನ್ನಬಸು ಹುರಕಡ್ಲಿ ಯವರ ಸೇವಾ ಕಾರ್ಯ ಶ್ಲಾಘನೀಯ ಎಂದರು.
ತರಬೇತುದಾರ ಎಂ.ಗುಡ್ಡಪ್ಪ, ಕಾನಿಪ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ, ಶಿಕ್ಷಕಿ ಎಸ್.ಬಿ. ಕರೆನ್ನವರ ಮಾತನಾಡಿದರು.
ಪುರಸಭೆ ಸದಸ್ಯೆ ಸವಿತಾ ಹುರಕಡ್ಲಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಹನುಮಂತ ಶಿರೋಳ, ಮಹಾದೇವಪ್ಪ ಹೊಸಕೋಟಿ, ಸಿದ್ದು ಧಡೂತಿ, ಬಸವರಾಜ ಗಿರಿಸಾಗರ, ಮಹಾದೇವ ಟಿರಕಿ ಇತರರಿದ್ದರು. ಕಾವ್ಯ ಪ್ರಾರ್ಥಿಸಿದರು. ನಾರನಗೌಡ ಉತ್ತಂಗಿ ನಿರೂಪಿಸಿದರು.