ಮೈಸೂರು: ಸಮಾಜಕ್ಕೆ ಸದಾ ಏನಾದರೂ ಕೊಡುಗೆ ನೀಡಬೇಕು ಎಂಬ ತುಡಿತ ತಾತಯ್ಯ ಅವರಿಗೆ ಇತ್ತು ಎಂದು ಅಧ್ಯಾತ್ಮ ಪ್ರವಚನಕಾರ ಡಾ.ವಿ.ಬಿ.ಆರತಿ ಹೇಳಿದರು.
ಅನಾಥಾಲಯದಿಂದ ಭಾನುವಾರ ಅನಾಥಾಲಯದ ಆವರಣದಲ್ಲಿ ಆಯೋಜಿಸಿದ್ದ ಎಂ.ವೆಂಕಟಕೃಷ್ಣಯ್ಯ (ತಾತಯ್ಯ) 181ನೇ ಜಯಂತ್ಯುತ್ಸವದ ಅಂಗವಾಗಿ ಪ್ರಶಸ್ತಿ ಪ್ರದಾನ, ಫಲಾನುಭವಿ ಸಾಧಕ ಪ್ರಶಸ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಹುತೇಕರು ಸಮಸ್ಯೆಗಳನ್ನು ಗಮನಿಸುತ್ತೇವೆ. ಆದರೆ ಪರಿಹಾರದ ಬಗ್ಗೆ ಅವಲೋಕಿಸುವುದಿಲ್ಲ. ಒಂದು ವೇಳೆ ಅವಲೋಕಿಸಿದರೂ ತಾಳ್ಮೆಯಿಂದ ಮುಂದುವರಿಯುವುದಿಲ್ಲ. ಅದಕ್ಕೆಲ್ಲ ಹಣ, ಅಧಿಕಾರ ಬೇಕು ಎಂದುಕೊಳ್ಳುವವರೇ ಹೆಚ್ಚು ಎಂದರು.
ಆದರೆ ಅಂದಿನ ಕಾಲದಲ್ಲಿ ಯಾವುದೇ ಅಪೇಕ್ಷೆ ಇಲ್ಲದೆ ತಾತಯ್ಯ ಅವರು ಸಮಾಜ ಸೇವಾ ಕಾರ್ಯದಲ್ಲಿ ತೊಡಗಿದ್ದರು. ಸಂಕಷ್ಟದಲ್ಲಿ ಇರುವವರನ್ನು ಕಂಡು ಮರಗುತ್ತಿದ್ದರು. ಕೈಯಲ್ಲಿ ಅದ ಸಹಾಯ ಮಾಡುತ್ತಿದ್ದರು ಎಂದು ಹೇಳಿದರು.
ಮಹನೀಯರ ಬಗ್ಗೆ ತಿಳಿಸಿಕೊಡುತ್ತಿದ್ದ ನನ್ನ ತಂದೆಯವರು ತಾತಯ್ಯ ಅವರ ಕುರಿತು, ಅವರ ಸೇವಾಕಾರ್ಯ ಕುರಿತು ಪರಿಚಯಿಸಿಕೊಟ್ಟಿದ್ದರು. ಇದರಿಂದ ಅವರ ಕುರಿತು ಹೆಮ್ಮೆ, ಸಂಬಂಧಿಕರು ಎನ್ನುವ ಸಂತೋಷವೂ ಇತ್ತು ಎಂದರು.
ಸಮಾಜ ಸೇವಾ ಕಾರ್ಯ ಮಾಡುವುದಕ್ಕೆ ನಿಜಕ್ಕೂ ಬೇಕಿರುವುದು ಒಳ್ಳೆಯ ಹೃದಯ. ಅಂತಹ ಸದ್ಗುಣ ತಾತಯ್ಯ ಹೊಂದಿದ್ದರು. ಅವರೇನು ದೊಡ್ಡ ಆಸ್ತಿ ಇಟ್ಟುಕೊಂಡು ಸಮಾಜ ಸೇವಾ ಕಾರ್ಯ ಶುರು ಮಾಡಿದರವಲ್ಲ ಎಂದು ಹೇಳಿದರು.
ಇಂದಿನ ಮಕ್ಕಳಿಗೆ ಸಮಸ್ಯೆಗಳು, ಕಷ್ಟ ತಿಳಿಯುತ್ತಿಲ್ಲ. ಎಲ್ಲವೂ ಸುಲಭವಾಗಿ ದೊರಕುವಂತಾಗಿದೆ. ಜೀವನ ಎಲ್ಲವನ್ನು ಕೊಟ್ಟರೇ ಸಮಸ್ಯೆಗಳು ಶುರುವಾಗುತ್ತವೆ. ಹಾಗಾಗಿ ಕಷ್ಟ ಗೊತ್ತಾಗಬೇಕು. ಇದರಿಂದ ಕುಟುಂಬ, ಸಮಾಜಕ್ಕೂ ನಾವು ಕೊಡುಗೆ ನೀಡಿದಂತೆ ಎಂದರು.
ಇದೇ ಸಂದರ್ಭದಲ್ಲಿ ನಗರದ ಉಷಾಕಿರಣ ಚಾರಿಟಬಲ್ ಟ್ರಸ್ಟ್ ಕಣ್ಣಿನ ಆಸ್ಪತ್ರೆ ತಾತಯ್ಯ ಪ್ರಶಸ್ತಿಯನ್ನು ವೈದ್ಯ ದಂಪತಿ ಡಾ.ಉಮಾ, ಡಾ.ರವಿಶಂಕರ್ ಪಡೆದುಕೊಂಡರು. ತಾತಯ್ಯ ಶ್ರೀ ಫಲಾನುಭವಿ ಸಾಧಕ ಪ್ರಶಸ್ತಿಯನ್ನು ವಿದ್ವಾಂಸ ಟಿ.ವಿ.ಸತ್ಯನಾರಾಯಣ ಅವರಿಗೆ ಪ್ರದಾನ ಮಾಡಲಾಯಿತು. ಅನಾಥಾಲಯದ ಅಧ್ಯಕ್ಷ ಸಿ.ವಿ.ಗೋಪಿನಾಥ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎನ್.ವಿ.ದಿನೇಶ್, ಕಾರ್ಯದರ್ಶಿ ಎಚ್.ಅಶ್ವಥ್ ನಾರಾಯಣ, ಹಿರಿಯ ವಕೀಲ ಎ.ಎಸ್.ನಟರಾಜ್ ಇತರರು ಇದ್ದರು.