ಜಿಲ್ಲೆ

ಏಳು ತಿಂಗಳ ವೇತನ ಪಾವತಿಗೆ ಧರಣಿ: ನಗರದಲ್ಲಿ ಟಾಸ್ಕ್‌ವರ್ಕ್ ನೌಕರರ ಪ್ರತಿಭಟನೆ

ಮಂಡ್ಯ: ಏಳು ತಿಂಗಳಿಂದ ವೇತನ ಪಾವತಿಸುವಂತೆ ಒತ್ತಾಯಿಸಿ ಕಾವೇರಿ ನೀರಾವರಿ ನಿಗಮದ ಕೃಷ್ಣರಾಜಸಾಗರ ಆಧುನಿಕರಣ ಮತ್ತು ಮಧ್ಯಮ ನೀರಾವರಿ ಯೋಜನೆಗಳ ವೃತ್ತ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಟಾಸ್ಕ್‌ವರ್ಕ್ ದಿನಗೂಲಿ ನೌಕರರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ಕಾವೇರಿ ಭವನ ಆವರಣದಲ್ಲಿ ನೌಕರರ ಸಂಘದ ನೇತೃತ್ವದಲ್ಲಿ ಧರಣಿ ನಡೆಸಿ ಬಾಕಿ ವೇತನ ಪಾವತಿಗೆ ಆಗ್ರಹಿಸಿದರು. ಸುಮಾರು 650 ನೌಕರರು ಹೊರಗುತ್ತಿಗೆ ಆಧಾರದಡಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಫೆಬ್ರವರಿ ತಿಂಗಳಿಂದ ವೇತನ ಪಾವತಿ ಮಾಡಿಲ್ಲ. ಇದರಿಂದ ಕುಟುಂಬ ನಿರ್ವಹಣೆಗೆ ಕಷ್ಟಕರವಾಗಿದ್ದು, ಮಕ್ಕಳನ್ನು ಶಾಲೆ ಮತ್ತು ಕಾಲೇಜಿಗೆ ಸೇರ್ಪಡೆ ಮಾಡಲು ತೊಂದರೆಯಾಗುತ್ತಿದೆ. ಈ ಕೂಡಲೇ ಅಧಿಕಾರಿಗಳು ಬಾಕಿ ಇರುವ ವೇತನ ಪಾವತಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಧರಣಿಯಲ್ಲಿ ಸಂಘದ ಅಧ್ಯಕ್ಷ ಶಿವಲಿಂಗಯ್ಯ, ಕಾರ್ಯದರ್ಶಿ ರಾಮೇಗೌಡ, ಮಹೇಶ್, ಎಸ್.ಎಂ.ರವಿ, ವೈರಮುಡಿ, ಜೆ.ಸತೀಶ್, ನಾಗರಾಜ್ ಇತರರಿದ್ದರು.