ಜಿಲ್ಲೆ

ಮಳೆಗಾಲದ ತುರ್ತು ಸ್ಥಿತಿ ನಿರ್ವಹಣೆಗೆ ಕಾರ್ಯಪಡೆ ರಚನೆ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಮಳೆಗಾಲದ ಹಿನ್ನೆಲೆಯಲ್ಲಿ ಅಗತ್ಯ ತುರ್ತು ಕಾರ್ಯಾಚರಣೆಗೆ ಹಾಗೂ ಮುಂಜಾಗೃತೆಗಾಗಿ ಮಹಾನಗರ ಪಾಲಿಕೆ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಕಾರ್ಯಪಡೆ ರಚಿಸಲಾಗಿದೆ. ತುರ್ತು ಕಾಮಗಾರಿ ಕೈಗೊಳ್ಳುವ ಗುತ್ತಿಗೆದಾರರಿಗೆ ತಕ್ಷಣ ಹಣ ನೀಡಲು ನಿರ್ಧರಿಸಲಾಗಿದೆ ಎಂದು ಮಹಾಪೌರ ರಾಮಪ್ಪ ಬಡಿಗೇರ ಹೇಳಿದರು.

ನಗರದಲ್ಲಿ ಬುಧವಾರ ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಪಾಲಿಕೆ, ಅರಣ್ಯ ಇಲಾಖೆ, ಹೆಸ್ಕಾಂ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನೊಳಗೊಂಡ ಈ ಕಾರ್ಯಪಡೆಯ ನೇತೃತ್ವವನ್ನು ಪಾಲಿಕೆ ವಲಯ ಸಹಾಯಕ ಆಯುಕ್ತರು ವಹಿಸಿಕೊಳ್ಳಲಿದ್ದಾರೆ. ವಿವಿಧ ವಲಯ ವ್ಯಾಪ್ತಿಯಲ್ಲಿ ಸಂಭವಿಸುವ ತುರ್ತು ಪರಿಸ್ಥಿತಿಯನ್ನು ಈ ಕಾರ್ಯಪಡೆ ನಿಭಾಯಿಸಲಿದೆ. ತುರ್ತು ಪರಿಸ್ಥಿತಿ ನಿಭಾಯಿಸುವ ಉದ್ದೇಶದಿಂದ ಪಾಲಿಕೆಯ ಪ್ರತಿ ಸದಸ್ಯರಿಗೆ ತಲಾ 25 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು.

ಮಳೆಗಾಲದ ಹಿನ್ನೆಲೆಯಲ್ಲಿ ಪ್ರತಿ ವರ್ಷ ಮೇದಿಂದ ಗಟಾರು ಸ್ವಚ್ಛತೆ ಸೇರಿದಂತೆ ಇನ್ನಿತರ ಮುಂಜಾಗೃತಾ ಕಾರ್ಯ ಕೈಗೊಳ್ಳಲಾಗುತ್ತಿತ್ತು. ಆದರೆ, ಈ ಬಾರಿ ಏಪ್ರಿಲ್​ನಿಂದಲೇ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದರು.

ಕೈಗಾರಿಕೆ ವಸಾಹತುಗಳಲ್ಲಿನ ಕೈಗಾರಿಕೆ ಕಟ್ಟಡಗಳಿಗೆ ಇ ಸ್ವತ್ತು ನೀಡುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಇತ್ತೀಚೆಗೆ ಸಭೆ ನಡೆದಿದೆ. ಕೈಗಾರಿಕೋದ್ಯಮಿಗಳು ಕೆಐಎಡಿಬಿಗೆ ಸರ್ವೀಸ್ ಚಾರ್ಜ್ ತುಂಬಿತ್ತಾರೆ ಅಷ್ಟೇ. ಆದರೆ, ಪಾಲಿಕೆಗೆ ತೆರಿಗೆ ಪಾವತಿಸುವುದು ಕಡ್ಡಾಯ ಎಂದು ತಿಳಿಸಿದರು.

ಹುಬ್ಬಳ್ಳಿ-ಧಾರವಾಡದಲ್ಲಿರುವ ರೈಲ್ವೆ ಆಸ್ತಿಯಿಂದ ಬಾಕಿ ತೆರಿಗೆ ಬರಬೇಕಿದೆ. ಇದಕ್ಕಾಗಿ ಪಾಲಿಕೆ ಹಾಗೂ ರೈಲ್ವೆ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಸುಮಾರು 17 ಕೋಟಿ ರೂ. ತೆರಿಗೆ ಬರಬೇಕಿದೆ. ಈ ಆರ್ಥಿಕ ವರ್ಷದಲ್ಲಿ 140 ಕೋಟಿ ರೂ. ತೆರಿಗೆ ಸಂಗ್ರಹಿಸುವ ಗುರಿ ಇದೆ ಎಂದರು.

ಬುಧವಾರ ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ 25 ಕರೆಗಳು ಬಂದಿದ್ದು, 39 ದೂರು ದಾಖಲಾಗಿವೆ ಎಂದು ತಿಳಿಸಿದರು.

ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.