ಕೋಲಾರ: ಸಮಾಜದಲ್ಲಿ ವಿಪತ್ತು ಸಂಭವಿಸಿದಾಗ ಸಮರ್ಪಕವಾಗಿ ಜನರ ನೆರವಿಗೆ ಧಾವಿಸಿ ರಕ್ಷಣೆ ಮಾಡುವುದು ವಿಪತ್ತು ನಿರ್ವಹಣಾ ಪಡೆಯ ಜವಾಬ್ದಾರಿಯಾಗಿತ್ತದೆ. ಆತ್ಮವಿಶ್ವಾಸ ಮೂಡಿಸುವ ಸಲುವಾಗಿ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ವತಿಯಿಂದ ಆಯೋಜಿಸಿದ್ದ ಕ್ಷಿಪ್ರ ಕಾರ್ಯಾಚರಣೆ ತಂಡ ಉದ್ಘಾಟಿಸಿ ಮಾತನಾಡಿ, ನಾವೆಲ್ಲರೂ ನೆಮ್ಮದಿಯಾಗಿ ಸುಖವಾಗಿ ಜೀವಿಸುತ್ತಿದ್ದೇವೆ ಅದಕ್ಕೆ ಕಾರಣ ಯೋಧರು. ಅದೇ ರೀತಿ ಜಿಲ್ಲೆಯಲ್ಲಿ ಮಳೆ, ವಿಪತ್ತುಗಳು ಸಂಭವಿಸಿದಾಗ ಜಿಲ್ಲಾ ವಿಪತ್ತು ನಿರ್ವಹಣಾ ಪಡೆ ಸನ್ನದ್ಧರಾಗಿ ಕಾರ್ಯ ನಿರ್ವಹಿಸಲು ಪ್ರ ಕಾರ್ಯಪಡೆಯ ರಚಿಸಲಾಗಿದೆ ಎಂದರು.
ಸಾರ್ವಜನಿಕರ ಪ್ರಾಣ, ಆಸ್ತಿ ರಕ್ಷಣೆ ಮಾಡುವಂತಹ ಕಾರ್ಯ ಜಿಲ್ಲಾ ವಿಪತ್ತು ನಿರ್ವಹಣಾ ಪಡೆಯ ಮುಖ್ಯ ಉದ್ದೇಶವಾಗಿದೆ. ವಿಪತ್ತುಗಳು ಸಂಭವಿಸಿದಾಗ ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ತಿಳಿಸಿದರು.
ವಿಪತ್ತು ನಿರ್ವಹಣಾ ತಂಡದಲ್ಲಿ 300 ಜನರಿದ್ದು, ತರಬೇತಿ ಪಡೆದು ಪರಿಣಿತರಾಗಿದ್ದಾರೆ. ಒಬ್ಬರು 10 ಜನರನ್ನು ತಯಾರಿ ಮಾಡಿದರೆ ಆ ತಂಡವು ಮತ್ತಷ್ಟು ಬಲಿಷ್ಠವಾಗುತ್ತದೆ. ವಿಪತ್ತು ನಿರ್ವಹಣೆಯಲ್ಲಿ ಎನ್ಎಸ್ಎಸ್, ಸ್ಕೌಟ್ಸ್ ಗೈಡ್ಸ್, ಎನ್ಜಿಒಗಳ ಜವಾಬ್ದಾರಿ ಅತಿಮುಖ್ಯವಾಗಿದೆ. ಸಾರ್ವಜನಿಕರ ಸಹಭಾಗಿತ್ವ ಸಹ ಮುಖ್ಯವಾಗಿದ್ದು, ಎಲ್ಲರ ಜೀವನ ರಕ್ಷಣೆ ಮಾಡುವ ಸಾಮಾಜಿಕ ಹೊಣೆಗಾರಿಕೆ ಸಮುದಾಯಗಳಿಗೂ ಬರಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಮಂಗಳಾ, ಉಪವಿಭಾಗಾಧಿಕಾರಿ ಡಾ.ಮೈತ್ರಿ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಾರಿನ ಸಿಕ್ಕಲಿಗರ್ ಮತಿತರರು ಹಾಜರಿದ್ದರು.
ಸುಳ್ಳು ಸುದ್ದಿ ತಡೆಯಿರಿ
ಜಿಲ್ಲೆಯಲ್ಲಿ ಯಾವುದೇ ವಿಪತ್ತು ಸಂಭವಿಸಿದಾಗ ಕಾರ್ಯಪಡೆ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಬೇಕು. ಸಮಸ್ಯೆಯಲ್ಲಿ ಸಿಲುಕ್ಕಿರುವವರನ್ನು ಸುರತ ಸ್ಥಳಕ್ಕೆ ಸ್ಥಳಾಂತರಿಸಬೇಕು. ವಿಪತ್ತು ನಿರ್ವಹಣೆ, ಉಪಶಮನ ಮಾಡಲು ಸದಾ ಸನ್ನದ್ಧವಾಗಿರಲು ತರಬೇತಿ ಕೊಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಹೇಳಿದರು. 300 ಹೆಚ್ಚಿನ ಸ್ವಯಂ ಸೇವಕರು ಮೊದಲು ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುವ ಸುಳ್ಳು ಸುದ್ದಿಗಳನ್ನು ತಡೆಯಬೇಕು. ಅಂತಹ ವಿಚಾರಗಳು ಇದ್ದರೆ ಪೊಲೀಸ್ ಕಂಟ್ರೋಲ್ ರೂಂಗೆ ಕರೆಮಾಡಿ ಖಚಿತ ಪಡಿಸಿಕೊಳ್ಳಬಹುದು. ಎಲ್ಲ ಇಲಾಖೆಗಳು ಸೇರಿ ನಡೆಸುವ ತರಬೇತಿ ಪಡೆದುಕೊಂಡು ಸಂಪೂರ್ಣ ಕಾರ್ಯಾಚರಣೆಯಲ್ಲಿ ತೊಡಗಿಕೊಳ್ಳಿ ಎಂದರು.
ಜಿಲ್ಲೆಯಲ್ಲೇ ಮೊದಲು
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವಿಣ್.ಪಿ.ಬಾಗೇವಾಡಿ ಮಾತನಾಡಿ, ಜಿಲ್ಲಾಡಳಿತ ಕ್ಷಿಪ್ರ ಕಾರ್ಯಾಚರಣೆ ತಂಡ ಯೋಜನೆ ರೂಪಿಸಿದ್ದು, ಇದು ನಮ್ಮ ಜಿಲ್ಲೆಯಲ್ಲಿಯೇ ಮೊದಲು ಜಾರಿಗೆ ತರಲಾಗಿದೆ. ಆದ್ದರಿಂದ ಇಂತಹ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಯಶಸ್ವಿಯಾದ ಜಿಲ್ಲಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.