ಜಿಲ್ಲೆ

ಸಿಂಗಲ್ಸ್​ನಲ್ಲಿ ತರುಣ ಮೊರಬಗೆ ಪ್ರಶಸ್ತಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಬ್ಯಾಡ್ಮಿಂಟನ್​ ಅಸೋಸಿಯೇಶನ್​ ವತಿಯಿಂದ ನಗರದ ಆರ್​.ಎನ್​. ಶೆಟ್ಟಿ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಓಪನ್​ ಬ್ಯಾಡ್ಮಿಂಟನ್​ ಪಂದ್ಯಾವಳಿಯ ಪುರುಷರ ಸಿಂಗಲ್ಸ್​ನಲ್ಲಿ ತರುಣ ಮೊರಬ ಪ್ರಶಸ್ತಿ ಪಡೆದಿದ್ದಾರೆ.
ಸಿಂಗಲ್ಸ್​ ವಿಭಾಗದ ಫೈನಲ್​ ಪಂದ್ಯದಲ್ಲಿ ಪುಣೆಯ ವಸೀಂ ಶೇಖ್​ ಜತೆಗೆ ಸೆಣಸಾಡಿದ ತರುಣ ಮೊರಬ ಎರಡು ನೇರ ಸೆಟ್​ಗಳಲ್ಲಿ 24-26, 14-21 ಅಂಕಗಳ ಅಂತರದಿಂದ ಜಯಗಳಿಸಿದರು.
ಪುರುಷರ ಡಬಲ್ಸ್​ನಲ್ಲಿ ಬೆಂಗಳೂರಿನ ಸಹಸ್ರ ಹಾಗೂ ಆದರ್ಶ ಜೋಡಿಯು ಪುಣೆಯ ವಸೀಂ ಹಾಗೂ ಖಾನ್​ ಜೋಡಿಯನ್ನು ಸೋಲಿಸಿ ಡಬಲ್ಸ್​ ಪ್ರಶಸ್ತಿ ಹಾಗೂ 20 ಸಾವಿರ ರೂ. ನಗದು ಬಹುಮಾನ ಪಡೆದರು. 45ವರ್ಷಕ್ಕಿಂತ ಕಿರಿಯರ ಪುರುಷರ ಡಬಲ್ಸ್​​ನಲ್ಲಿ ಬೆಂಗಳೂರಿನ ಅಮಲ್​ ದೇವ್​ ಹಾಗೂ ಕಿರಣ ಜೋಡಿ ಧಾರವಾಡದ ಪ್ರಭುರಾಜ ಹಾಗೂ ಬಳ್ಳಾರಿಯ ಕೃಷ್ಣ ಜೋಡಿಯನ್ನು ಸೋಲಿಸಿ ಪ್ರಶಸ್ತಿ ಜಯಿಸಿದರೆ, 75 ವರ್ಷಕ್ಕಿಂತ ಹಿರಿಯ ಪುರುಷರ ಜಂಬಲ್​ ಡಬಲ್ಸ್​ನಲ್ಲಿ ಬೆಂಗಳೂರಿನ ನವೀನ ಹಾಗೂ ಉಮೇಶ ಜೋಡಿಯು ಮೈಸೂರಿನ ಮಧುಸೂಧನ ಹಾಗೂ ದರ್ಶಶ ಜೋಡಿಯನ್ನು ಪರಾಭವಗೊಳಿಸಿತು.
ಇದಕ್ಕೂ ಪೂರ್ವದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಪಂದ್ಯಾವಳಿಗೆ ಚಾಲನೆ ನೀಡಿದರು. ಅಂತರಾಷ್ಟ್ರೀಯ ಕ್ರೀಡಾಪಟು ಅಭಿಷೇಕ ಯಲಿಗಾರ, ಅನಿತಾ ಶಾನಭಾಗ, ರೋಹಿತ್​ ಪಾಟೀಲ, ರಾಜು ಕೆ.ಎಂ., ರವಿ ಶಿವಯ್ಯನಮಠ, ಗೋಪಾಲಕೃಷ್ಣ, ಪ್ರಕಾಶ ಹೊಂಡೆದ, ಇತರರು ಉಪಸ್ಥಿತರಿದ್ದರು.