ಜಿಲ್ಲೆ

ಭದ್ರಾ ನಾಲೆಗೆ ಬಿದ್ದ ಕಡವೆ ರಕ್ಷಣೆ

Chikkamagaluru

ತರೀಕೆರೆ: ತಾಲೂಕಿನ ಸಮತಳ ಗ್ರಾಮ ಸಮೀಪದ ಆಯತಪ್ಪಿ ಭದ್ರಾ ಮೇಲ್ದಂಡೆ ನಾಲೆಗೆ ಬಿದ್ದಿದ್ದ ಕಡವೆಯನ್ನು ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಿಸಿದರು.

ನಾಲೆಯಿಂದ ಹೊರ ಬರಲಾಗದೆ ನೀರಿನಲ್ಲಿ ತೇಲಿ ಹೋಗುತ್ತಿದ್ದ ಕಡವೆಯನ್ನು ಪಟ್ಟಣದ ಗಾಳಿಹಳ್ಳಿ ಕ್ರಾಸ್ ಬಳಿ ಗಮನಿಸಿದ ವ್ಯಕ್ತಿಯೊಬ್ಬರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ನಾಲೆಯಲ್ಲಿ ತೇಲಿ ಹೋಗುತ್ತಿದ್ದ ಕಡವೆ ಹಿಂಬಾಲಿಸಿ ಸಮತಳ ಗ್ರಾಮ ಸಮೀಪ ಬಲೆ ಹಾಕಿ ರಕ್ಷಿಸಿದರು.

ಸುಮಾರು ಏಳು ಕಿ.ಮೀಗೂ ಹೆಚ್ಚು ದೂರ ನೀರಿನಲ್ಲಿ ತೇಲಿ ನಿತ್ರಾಣಗೊಂಡಿದ್ದ ಕಡವೆಯನ್ನು ಪ್ರಾಣಾಪಾಯದಿಂದ ಪಾರಾದ ಮೇಲೆ ಸಂತೇದಿಬ್ಬ ಅರಣ್ಯಕ್ಕೆ ಬಿಟ್ಟರು.

ಭದ್ರಾ ಮೇಲ್ದಂಡೆ ನಾಲೆಯಲ್ಲಿ ನೀರು ಹರಿಸಲು ಆರಂಭಿಸಿದಾಗಿನಿಂದ ನೀರು ಕುಡಿಯುವ ಧಾವಂತದಲ್ಲಿ ನಾಲೆ ಕಡೆ ಬರುವ ವನ್ಯಜೀವಿಗಳು ಜೀವ ಕಳೆದುಕೊಳ್ಳುವಂತಾಗಿದೆ. ಇತ್ತೀಚೆಗೆ ಅತ್ತಿಗನಾಳು ಅರಣ್ಯ ವ್ಯಾಪ್ತಿಯಲ್ಲಿ ಭದ್ರಾ ಮೇಲ್ದಂಡೆ ನಾಲೆಗೆ ಕಡವೆಯೊಂದು ಆಯತಪ್ಪಿ ಬಿದ್ದು ಮೃತಪಟ್ಟಿತ್ತು.