ಜಿಲ್ಲೆ

ಜಂತುಹುಳು ಮಾತ್ರೆ ವಿತರಣೆಗೆ ಟಾರ್ಗೆಟ್

Chitradurga

ಚಿತ್ರದುರ್ಗ: ರಾಜ್ಯಾದ್ಯಂತ ಮಾರ್ಚ್ 14ರಿಂದ 25ರವರೆಗೆ ಜಂತುಹುಳು ನಿವಾರಣಾ ಅಭಿಯಾನ ನಡೆಯಲಿದ್ದು, ಜಿಲ್ಲೆಯ 5.76 ಲಕ್ಷ ಮಕ್ಕಳಿಗೆ ಅಲ್ಬೆಂಡ ಜೋಲ್ ಮಾತ್ರೆ ಉಚಿತ ವಿತರಣೆಯಲ್ಲಿ ಶೇ.100 ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅಧಿಕಾರಿಗಳಿಗೆ ಸೂಚಿಸಿದರು.

ಡಿಸಿ ಕಚೇರಿಯಲ್ಲಿ ಸೋಮವಾರ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಅಭಿಯಾನದ ಅಂಗವಾಗಿ 1ರಿಂದ 19ನೇ ವಯಸ್ಸಿನ ಮಕ್ಕಳಿಗೆ ಅಲ್ಬೆಂಡಜೋಲ್ ಮಾತ್ರೆ ನೀಡಬೇಕು. ಅಂಗನವಾಡಿ, ಶಿಕ್ಷಣ, ಪಿಯು ಇಲಾಖೆಗಳಿಂದ ವಿದ್ಯಾರ್ಥಿಗಳ ನಿಖರ ಮಕ್ಕಳ ಸಂಖ್ಯೆ ಪಡೆದುಕೊಳ್ಳಬೇಕು. ಐಟಿಐ, ಪಾಲಿಟೆಕ್ನಿಕ್ ಹಾಗೂ ಪ್ರಥಮ ವರ್ಷದ ಡಿಗ್ರಿ ವಿದ್ಯಾರ್ಥಿಗಳಿಗೂ ತಪ್ಪದೆ ಮಾತ್ರೆ ನೀಡಬೇಕು. ಶಾಲೆ ಬಿಟ್ಟ, ಅಲೆಮಾರಿ ಮಕ್ಕಳಿಗಾಗಿ ವಿಶೇಷ ತಂಡಗಳನ್ನು ರಚಿಸಬೇಕು ಎಂದು ತಾಕೀತು ಮಾಡಿದರು.

ಡಿಎಚ್‌ಒ ಡಾ.ರಂಗನಾಥ ಮಾತನಾಡಿ, ಕಳೆದ ಸಾಲಿನಲ್ಲಿ ಜಿಲ್ಲೆಯ 5.76 ಲಕ್ಷ ಪೈಕಿ, 5.41 ಲಕ್ಷ ಮಕ್ಕಳಿಗೆ ಮಾತ್ರೆ ವಿತರಿಸುವುದರೊಂದಿಗೆ ಶೇ.94 ಸಾಧನೆ ಮಾಡಲಾಗಿತ್ತು. ಜಿಲ್ಲೆಗೆ 6.34 ಲಕ್ಷ ಅಲ್ಬೆಂಡಜೋಲ್ ಮಾತ್ರೆ ಬುಧವಾರ ಬಂದು ಸೇರಲಿವೆ. ಅಂಗನವಾಡಿ, ಆಶಾ ಕಾರ‌್ಯಕರ್ತೆಯರು ಮನೆ, ಮನೆಗೆ ತೆರಳಿ ಮಕ್ಕಳಿಗೆ ನಿಯಮಾನುಸಾರ ಮಾತ್ರೆ ವಿತರಿಸಲಿದ್ದಾರೆ ಎಂದರು.

ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳಿಗೆ 23ರಂದು ಪರೀಕ್ಷೆ ಮುಗಿದ ನಂತರ ಮಾತ್ರೆ ವಿತರಿಸಲಾಗುವುದು. ಮಾರ್ಚ್ 31ರಂದು ಪ್ರಥಮ ಪಿಯುಸಿ ಮಕ್ಕಳ ಫಲಿತಾಂಶ ಬರಲಿದ್ದು, ಅಂದು ಮಾತ್ರೆ ವಿತರಿಸಲು ಸಿದ್ಧತೆ ನಡೆಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅನುಸಾರ 1ರಿಂದ 6 ವರ್ಷಗಳ 1.10 ಲಕ್ಷ ಮಕ್ಕಳು, ಶಿಕ್ಷಣ ಇಲಾಖೆ ಮಾಹಿತಿಯಂತೆ 1 ರಿಂದ 10ನೇ ತರಗತಿ ಓದುತ್ತಿರುವ 2. 55 ಲಕ್ಷ ಮಕ್ಕಳು ಇದ್ದಾರೆ ಎಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೆಶಕಿ ಭಾರತಿ ಆರ್.ಬಣಕಾರ್ ಮತ್ತಿತರರು ಇದ್ದರು.

*ದಡಾರ ಮುಕ್ತ ಭಾರತ

ಭಾರತದಲ್ಲಿ 2023ನೇ ವರ್ಷವನ್ನು ದಡಾರ ಮುಕ್ತ ವರ್ಷವನ್ನಾಗಿಸುವ ನಿಟ್ಟಿನಲ್ಲಿ ಕೇಂದ್ರ ಲಸಿಕಾ ಅಭಿಯಾನವ ಆರಂಭಿಸಿದೆ. ಜಿಲ್ಲೆಯಲ್ಲಿ ಕಳೆದ ಡಿಸೆಂಬರ್ ಅಂತ್ಯಕ್ಕೆ 280 ಹಾಗೂ ಮಾರ್ಚ್ 2023ರವರೆಗೆ 139 ದಡಾರ ಪ್ರಕರಣಗಳು ಕಂಡುಬಂದಿವೆ ಎಂದು ಆರ್‌ಸಿಎಚ್ ಅಧಿಕಾರಿ ಡಾ.ರೇಣುಪ್ರಸಾದ್ ಹೇಳಿದರು.

ಅಪೌಷ್ಟಿಕತೆ ತಡೆಗೆ ಸಹಕಾರಿ

ಅಪೌಷ್ಟಿಕತೆ ಕಡಿಮೆಗೊಳಿಸಲು ಹಾಗೂ ಜಂತುಹುಳುಗಳ ಬಾಧೆಯಿಂದ ರಕ್ಷಿಸಲು ಮಕ್ಕಳಿಗೆ ಆಲ್‌ಬೆಂಡಾಜೋಲ್ ಜಂತುಹುಳು ನಿವಾರಣಾ ಮಾತ್ರೆ ನೀಡಲಾಗುತ್ತಿದೆ ಎಂದು ಡಿಎಚ್‌ಒ ಡಾ.ಆರ್.ರಂಗನಾಥ್ ಹೇಳಿದರು.

ನಗರದ ಸರ್ಕಾರಿ ಕೋಟೆ ಪ್ರೌಢಾಶಾಲೆಯಲ್ಲಿ ರಾಷ್ಟ್ರಿಯ ಜಂತುಹುಳು ನಿವಾರಣಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ, ಜಂತು ಹುಳಗಳ ಬಾಧೆಯಿಂದ ಮಕ್ಕಳಲ್ಲಿ ರಕ್ತಹೀನತೆ ಹಾಗೂ ಬೌದ್ಧಿಕ ಬೆಳವಣಿಗೆ ಕುಂಠಿತಗೊಳ್ಳಬಹುದು. ಮಾತ್ರೆಯನ್ನು ಖಾಲಿ ಹೊಟ್ಟೆಯಲ್ಲೂ ಸೇವಿಸಬಹುದು ಎಂದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ರೇಣುಪ್ರಸಾದ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ಪ್ರಭಾರ ಮು ಖ್ಯಶಿಕ್ಷಕ ಜಿ.ಎಸ್.ಶಿವಣ್ಣ ಮಾತನಾಡಿದರು. ಆರೋಗ್ಯ ಇಲಾಖೆ ಕಾತ್ಯಾಣಮ್ಮ, ಶ್ರೀಧರ್, ಗೋಪಾಲಕೃಷ್ಣ ಇದ್ದರು.