ಜಿಲ್ಲೆ

ಕಾಲ-ಕಾಸಿಗೆ ಮಹತ್ವ ನೀಡಿದ್ದ ತರಳಬಾಳು ಗುರುಗಳು

ಹೊಳಲ್ಕೆರೆ: ತರಳಬಾಳು ಮಠದ ಹಿರಿಯ ಗುರುಗಳಾದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಕಾಲ ಮತ್ತು ಕಾಸಿಗೆ ಮಹತ್ವ ನೀಡಿದ್ದರ ಫಲವಾಗಿ ಇಂದು ಸಮುದಾಯ ಎಲ್ಲ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಿದೆ ಎಂದು ಶಿಕ್ಷಕ ಟಿ.ಪಿ.ಉಮೇಶ್ ಹೇಳಿದರು.

ಶ್ರೀಗಳ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಪಟ್ಟಣದ ಟಿಪಿಸಿಕೆ ಪ್ರೌಢಶಾಲೆ ಆವರಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿವಕುಮಾರ ಸ್ವಾಮೀಜಿ ಶ್ರಮದ ಸಂಕೇತ. ತಾವು ದುಡಿದು ಸಮಾಜದ ಪ್ರತಿಯೊಬ್ಬರೂ ದುಡಿಯಲು ಪ್ರೇರೇಪಿಸಿದರು. ಅವರು ಸಮಯ ಮತ್ತು ಹಣಕ್ಕೆ ಸದಾ ಮಹತ್ವ ನೀಡುತ್ತಿದ್ದರು. ಹಳ್ಳಿಗಳಲ್ಲಿ ಕೃಷಿ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಕ್ರಾಂತಿಕಾರಿಕ ಗುರುಗಳು ಎಂದು ಬಣ್ಣಿಸಿದರು.

ಐವತ್ತು ವರ್ಷಗಳಲ್ಲಿ ಮಧ್ಯಕರ್ನಾಟಕದ ಗ್ರಾಮೀಣ ಪ್ರದೇಶದ ಜನರು ಶಿಕ್ಷಣ ಪಡೆದು ಉನ್ನತ ಸ್ಥಾನಮಾನ, ಸರ್ಕಾರಿ ಹುದ್ದೆ ಪಡೆಯಲು ಹಿರಿಯ ಗುರುಗಳ ದೂರದೃಷ್ಟಿಯೇ ಕಾರಣ ಎಂದರು.

ಕೃಷಿ, ರಾಜಕೀಯ, ತಾಂತ್ರಿಕ, ಆರ್ಥಿಕ ರಂಗದಲ್ಲಿ ಎಲ್ಲ ಸಮಾಜದವರು ಬೆಳೆಯಲು ಕಾರಣರಾದರು. ಚಂದ್ರಯಾನ ಮೂರರ ಯಶಸ್ಸಿನಲ್ಲಿ ಶ್ರಮಿಸಿದ ವಿಜ್ಞಾನಿಗಳಲ್ಲಿ ತರಳಬಾಳು ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಇರುವುದು ಶ್ಲಾಘನೀಯ ಎಂದು ಹೇಳಿದರು.

ಲಿಂಗೈಕ್ಯ ಶ್ರೀಗಳ ಮುಂದಾಲೋಚನೆ, ಕಾಯಕನಿಷ್ಠೆ, ಸಮಯ ಪಾರಿಪಾಲನೆ, ಅಧ್ಯಯನ, ಶ್ರಮದ ಗುಣ ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡರೇ ನಾಡಿನ ಬಹುದೊಡ್ಡ ವ್ಯಕ್ತಿಗಳಾಗಿ ರೂಪುಗೊಳ್ಳಬಹುದು ಎಂದರು.

ರಾಮಗಿರಿ ಕರಿಸಿದ್ದೇಶ್ವರ ಪ್ರೌಢಶಾಲೆ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹೇಮಂತ್ ಕುಮಾರ್ ಮಾತನಾಡಿ, ಹಿರಿಯ ಜಗದ್ಗುರುಗಳ ದುಡಿಮೆ ಮಾರ್ಗದರ್ಶನದಲ್ಲಿ ಸಮಾಜದ ಜನರೆಲ್ಲ ಇಂದು ಸಿರಿವಂತರಾಗಿದ್ದೇವೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆ ಸಾಂಸ್ಕೃತಿಕ, ಸಾಹಿತ್ಯಿಕ ಮನೋಭಾವ ಬೆಳೆಸಿಕೊಂಡು ತಂದೆ-ತಾಯಿಗಳಿಗೆ ಗೌರವ ತರಬೇಕು ಎಂದು ತಿಳಿಸಿದರು.

ಟಿಪಿಸಿಕೆ ಪ್ರೌಢಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಲವಕುಮಾರ, ಸಿರಿಗೆರೆ ಅಣ್ಣನ ಬಳಗದ ಅಧ್ಯಕ್ಷ ರಾಜಶೇಖರಯ್ಯ, ವೀರಶೈವ ಸಮಾಜದ ಉಪಾಧ್ಯಕ್ಷ ಮಾರುತೇಶ್ ಇತರರಿದ್ದರು.