ಜಿಲ್ಲೆ

ಕೃಷ್ಣ ಮಠದಲ್ಲಿ ತಪ್ತ ಮುದ್ರಾಧಾರಣೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ಪ್ರಥಮನ ಏಕಾದಶಿ ಪ್ರಯುಕ್ತ ಬುಧವಾರ ಅಷ್ಟ ಮಠಾಧೀಶರು ರಾಜ್ಯದ ವಿವಿಧೆಡೆ ತಪ್ತಮುದ್ರಾಧಾರಣೆ ನೆರವೇರಿಸಿದರು.

ಕೃಷ್ಣ ಮಠದಲ್ಲಿ ಬೆಳಗ್ಗೆ ಸುದರ್ಶನ ಹೋಮದ ಬಳಿಕ ಅಗ್ನಕುಂಡದಲ್ಲಿ ಕಾದ ಶಂಖ, ಚಕ್ರ ಮುದ್ರೆಗಳನ್ನು ಮೊದಲಿಗೆ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಧರಿಸಿ, ನಂತರ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿಯವರಿಗೆ ಮುದ್ರಾಧಾರಣೆ ಮಾಡಿಸಿದರು. ಬಳಿಕ ಸಾವಿರಾರು ಮಂದಿ ಭಕ್ತರು ಸರತಿ ಸಾಲಿನಲ್ಲಿ ನಿಂತು ಉಭಯ ಮಠಾಧೀಶರಿಂದ ಮುದ್ರೆಯನ್ನು ಹಾಕಿಸಿಕೊಂಡರು. ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪಿಠದಲ್ಲಿ ಪೇಜಾವರ ಶ್ರೀವಿಶ್ವಪ್ರಸನ್ನತಿರ್ಥ ಶ್ರೀಪಾದರು ಅಭಿಮಂತ್ರಿಸಿದ ಚಕ್ರಶಂಖಮುದ್ರೆಗಳನ್ನು ಸುದರ್ಶನಹೋಮಾಗ್ನಿಯಲ್ಲಿ ತಪ್ತವಾಗಿಸಿ ಸ್ವಯಂ ಧಾರಣೆಮಾಡಿಕೊಂಡು, ಭಕ್ತರಿಗೆ ಮುದ್ರಾಧಾರಣೆ ಮಾಡಿಸಿದರು. ಸೋದೆ ವಾದಿರಾಜ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥರು ಬೆಂಗಳೂರಿನ ಶ್ರೀಕೃಷ್ಣ ವಾದಿರಾಜ ಮಂದಿರದಲ್ಲಿ ಹಾಗೂ ಮಲ್ಲೇಶ್ವರಂ ರಾಘವೇಂದ್ರ ಮಠದಲ್ಲಿ ತಪ್ತಮುದ್ರಾಧಾರಣೆ ನೆರವೇರಿಸಿದರು. ಕೇರಳದ ತ್ರಿಶೂರು, ಎರ್ನಾಕುಲಂನಲ್ಲಿ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಮೈಸೂರು ಕೃಷ್ಣ ಧಾಮದಲ್ಲಿ ಪಲಿಮಾರು ಶ್ರೀ ವಿದ್ಯಾಧಿಶ ತೀರ್ಥ ಸ್ವಾಮೀಜಿ, ಬೆಂಗಳೂರು ಪುತ್ತಿಗೆ ಮಠದಲ್ಲಿ ಅದಮಾರು ಹಿರಿಯ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಪಾಜಕ ಕ್ಷೇತ್ರದಲ್ಲಿ ಅದಮಾರು ಕಿರಿಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಶಿರೂರು ಮೂಲ ಮಠದಲ್ಲಿ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಮೂಲ ಮಠದಲ್ಲಿ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಭಕ್ತರಿಗೆ ಮುದ್ರಾ ಧಾರಣೆ ನೆರವೇರಿಸಿದರು.