ಪಾಂಡವಪುರ : ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ ವೈಫಲ್ಯ ಮತ್ತು ಬೇಜವಾಬ್ದಾರಿತನದಿಂದ ಸಂಘದ ಆದಾಯ ಇಳಿಮುಖವಾಗಿದೆ ಎಂದು ಷೇರುದಾರ ಸದಸ್ಯರು ಆರೋಪಿಸಿದರು.
ಪಟ್ಟಣದ ಟಿಎಪಿಎಂಎಸ್ ರೈತ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಡಿ.ಶ್ರೀನಿವಾಸ್ ಅಧ್ಯಕ್ಷೆತೆಯಲ್ಲಿ ಶುಕ್ರವಾರ ಆಯೋಜಿಸಿದ್ದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ್ದ ಷೇರುದಾರರು ಸಂಘದ ಆಡಳಿತ ಮಂಡಳಿ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಸಂಸ್ಥೆಯ ನೌಕರರು ಕಲ್ಯಾಣ ಮಂಟಪ, ಅಕ್ಕಿಗಿರಣಿ, ಪೆಟ್ರೋಲ್ ಬಂಕ್, ಬಟ್ಟೆ ಶಾಖೆ, ಬ್ಯಾಂಕ್ ಎಲ್ಲ ಕಡೆ ಅವ್ಯವಹಾರ ನಡೆಸಿದ್ದಾರೆ. ಆದರೆ ಇದಕ್ಕೆ ಯಾವುದೇ ಕ್ರಮ ಆಗಿಲ್ಲ.
ಈ ಹಿಂದಿನ ಕಾರ್ಯದರ್ಶಿ ರಾಮಚಂದ್ರು ಮತ್ತು ತಿಮ್ಮೇಗೌಡ ಅವರಿಂದ ವಸೂಲಿ ಆಗಬೇಕಿದ್ದ ಹಣ ಈವರೆಗೂ ವಸೂಲಾಗಿಲ್ಲ. ಸಂಸ್ಥೆಯ ನೌಕರ ಸಿ.ಎ.ಲೋಕೇಶ್ ಎಂಬುವವರು 2022-23 ಸಾಲಿನಲ್ಲಿ 3.71 ಲಕ್ಷ ಹಣ ದುರ್ಬಳಕೆ ಮಾಡಿಕೊಂಡಿದ್ದರೂ ಆಡಳಿತ ಮಂಡಳಿಯವರಿಗೆ ಈ ವಿಚಾರ ಗೊತ್ತಿಲ್ಲ ಎಂದರೆ ಯಾವ ರೀತಿ ಆಡಳಿತ ನಡೆಯುತ್ತಿದೆ.
ಒಂದು ವರ್ಷದ ಬಳಿಕ ಬಡ್ಡಿ ಸಮೇತ ಹಣ ವಸೂಲಿ ಮಾಡಲಾಗಿದೆ ಎಂದು ಈಗ ಉತ್ತರ ನೀಡುತ್ತಿದ್ದೀರಾ. ಹಣ ಸಂಸ್ಥೆಗೆ ಖಾತೆಗೆ ಜಮಾ ಆಗದೆ ಮುಂದಿನ ಖರೀದಿಗೆ ಡಿಮ್ಯಾಂಡ್ ಡ್ರಾಪ್ಟ್ ನೀಡಿದಾದ್ದರೂ ಯಾಕೆ? ಎಂದು ಷೇರುದಾರ ಸದಸ್ಯರಾದ ಪರಮೇಶ್, ಬಾಲಗಂಗಾಧರ್, ಹಾರೋಹಳ್ಳಿ ಶ್ರೀಧರ, ವಕೀಲ ಮುರುಳಿ, ಜನಾರ್ಧನ, ಸಿ.ಎಂ.ಮಹೇಶ್, ಹಿರೇಮರಳಿ ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಷೇರುದಾರ ಬಾಲಗಂಗಾಧರ ಮಾತನಾಡಿ, ಷೇರುದಾರರ ವಾರ್ಷಿಕ ಮಹಾಸಭೆ ದೊಡ್ಡದೋ ಅಥವಾ ಆಡಳಿ ಮಂಡಳಿ ದೊಡ್ಡದೋ? ಈ ಹಿಂದಿನ ಸಭೆಯ ನಡಾವಳಿಗಳನ್ನು ಕಾರ್ಯರೂಪಕ್ಕೆ ತರಲು ಆಡಳಿತ ಮಂಡಳಿಗೆ ಸಾಧ್ಯವಾಗುತ್ತಿಲ್ಲ ಎಂದರೆ ಈ ಸಭೆ ಯಾಕೆ ನಡೆಸಬೇಕು.
ಅವ್ಯವಹಾರಗಳನ್ನು ಪತ್ತೆ ಹಚ್ಚಲು ಷೇರುದಾರರನ್ನೊಳಗೊಂಡತೆ ಒಂದು ಸಮಿತಿ ಮಾಡಿ ಎಂದು ಹಿಂದಿನ ಸಭೆಯಲ್ಲಿ ತಿಳಿಸಲಾಗಿತ್ತು. ಆಡಳಿತ ಮಂಡಳಿ ಸದಸ್ಯರು ಮಹಾಸಭೆಗೆ ಅಗೌರವ ತೋರಿಸುತ್ತಿದ್ದೀರಾ, ಪಕ್ಷಾತೀತಾವಾಗಿ ಎಲ್ಲರನ್ನು ಸೇರಿಸಿಕೊಂಡು ಒಂದು ಸಮಿತಿ ಮಾಡಿ ಅವ್ಯವಹಾರಗಳನ್ನು ಪತ್ತೆ ಹಚ್ಚ ಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಕೆಲವು ಷೇರುದಾರರು ಆಕ್ಷೇಪ ವ್ಯಕ್ತಪಡಿಸಿ ಷೇರುದಾರರನ್ನು ಸೇರಿಸಿಕೊಂಡರೆ ಅವರು ಕೂಡ ಭ್ರಷ್ಟರಾಗಬಹುದು. ಹೀಗಾಗಿ ಆಡಳಿತ ಮಂಡಳಿ ನಿರ್ದೇಶಕರೇ ಒಂದು ಸಮಿತಿ ರಚಿಸಿಕೊಳ್ಳಲಿ ಎಂದು ಸಲಹೆ ನೀಡಿದರು.
ಮದುವೆಗೆ ರಿಯಾಯಿತಿ ನೀಡಿ : ಹಾರೋಹಳ್ಳಿ ಶ್ರೀಧರ ಮಾತನಾಡಿ, ಷೇರುದಾರರ ಸದಸ್ಯರ ಮಕ್ಕಳ ಮದುವೆಗೆ ಕಲ್ಯಾಣ ಮಂಟಪದಲ್ಲಿ 5 ಸಾವಿರ ರಿಯಾಯಿತಿ ಕೊಡಬೇಕು.
ಇತರೆ ದುಂದು ವೆಚ್ಚಗಳನ್ನು ಕಡಿಮೆ ಮಾಡಿ ರಿಯಾಯಿತಿ ನೀಡಿ. ಇದರಿಂದ ಬಡ ರೈತರ ಮಕ್ಕಳಿಗೆ ಅನುಕೂಲವಾಗಲಿದೆ. ಸಣ್ಣ ಪುಟ್ಟ ಸೊಸೈಟಿಗಳು ರಿಯಾಯಿತಿ ನೀಡುತ್ತಿರುವಾಗ ನೀವು ಏಕೆ ಕೊಡಬಾರದು.
ಜತೆಗೆ ಮರಣ ನಿಧಿಯನ್ನು 5 ಸಾವಿರ ರೂ. ಯಿಂದ 10 ಸಾವಿರ ರೂ.ಗೆ ಏರಿಸಬೇಕು. ಈ ವಿಚಾರದ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಧ್ಯಕ್ಷ ಡಿ.ಶ್ರೀನಿವಾಸ್ ಷೇರುದಾರರ ಪ್ರಶ್ನಿಗಳಿಗೆ ಉತ್ತರಿಸಿ ಕೆಲ ವಿಚಾರಗಳಿಗೆ ಸಂಬಂಧಿಸಿದಂತೆ ಸಣ್ಣ-ಪುಟ್ಟ ತಪ್ಪುಗಳು ನಡೆದಿರುಬಹುದು. ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಿಕೊಂಡು ಹೋಗುತ್ತೇವೆ. ಮದುವೆಗೆ 5 ಸಾವಿರ ರೂ. ರಿಯಾಯಿತಿ ನೀಡುತ್ತೇವೆ. ಅದೇ ರೀತಿ ಮರಣ ನಿಧಿ ಹೆಚ್ಚಳದ ಬಗ್ಗೆ ಮುಂದೆ ತೀರ್ಮಾನಿಸಲಾಗುವುದು.
ಸಂಸ್ಥೆಗೆ ಬರಬೇಕಾದ ಹಣ ವಸೂಲಾತಿ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಸಂಸ್ಥೆಯ ಹಿಂದಿನ ಕಾರ್ಯದರ್ಶಿ ರಾಮಚಂದ್ರು ಅವರಿಂದ ವಸೂಲಿಯಾಗಬೇಕಿದ್ದ ಹಣಕ್ಕೆ ಸಂಬಂಧಿಸಿದಂತೆ ಕೋರ್ಟ್ ತೀರ್ಪು ನೀಡಿದ್ದು, ಅದರಂತೆ ಸಂಸ್ಥೆಯ ಹಿಂದಿನ ಮತ್ತೊಬ್ಬ ನೌಕರ ತಿಮ್ಮೇಗೌಡರಿಂದ ಹಣ ವಸೂಲಿ ಮಾಡಲಾಗುವುದು ಎಂದು ವಿವರಣೆ ನೀಡಿದರು.
ಸಭೆಯಲ್ಲಿ ಆಡಳಿತ ಮಂಡಳಿ ನಿರ್ದೇಶಕರುಗಳಾದ ರಾಮಕೃಷ್ಣೇಗೌಡ, ಗುರುಸ್ವಾಮಿ, ಎಸ್.ದಯಾನಂದ್, ಚಿಕ್ಕಾಡೆ ಶ್ರೀಕಾಂತ್, ಹರಳಹಳ್ಳಿ ಚಿಟ್ಟಿಬಾಬು, ತಿಬ್ಬಮ್ಮ, ಬೆಟ್ಟಸ್ವಾಮಿಗೌಡ, ಜಯಲಕ್ಷ್ಮಮ್ಮ ಇತರರು ಇದ್ದರು.