ಹುಣಸೂರು ನಗರದಲ್ಲಿರುವ ಟಿಎಪಿಸಿಎಂಎಸ್ ಕಚೇರಿ. 
ಜಿಲ್ಲೆ

ಕಾಂಗ್ರೆಸ್ ಶಕ್ತಿ ಪ್ರಶ್ನಿಸಿದ ಟಿಎಪಿಸಿಎಂಎಸ್ ಫಲಿತಾಂಶ

ಅಭಿನಯ್ ಎಚ್.ಎಂ

ಹುಣಸೂರು: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಭರ್ಜರಿ ಗೆಲುವು ಹುಣಸೂರು ವಿಧಾನಸಭಾ ಕ್ಷೇತ್ರದ ರಾಜಕೀಯ ಲೆಕ್ಕಾಚಾರಗಳಿಗೆ ಗ್ರಾಸವಾಗಿದೆ.

ಶಾಸಕ ಜಿ.ಡಿ.ಹರೀಶ್‌ಗೌಡ ತಮ್ಮ ಎರಡೂವರೆ ವರ್ಷಗಳ ಅಧಿಕಾರಾವಧಿಯಲ್ಲಿ ಇದಕ್ಕೆ ಅಪವಾದವೆನ್ನುವಂತೆ ಸಾಮಾಜಿಕ ನ್ಯಾಯವನ್ನು ತಮ್ಮ ಕಾರ್ಯಶೈಲಿಯ ಮೂಲಕ ಪ್ರತಿಪಾದಿಸಿದ್ದಾರೆ. ಇಲ್ಲಿನ ಟಿಎಪಿಸಿಎಂಎಸ್‌ನ ಎ ತರಗತಿ ವಿಭಾಗದ ನಾಲ್ಕು ಸ್ಥಾನಗಳು ಸಾಮಾನ್ಯ ಕ್ಷೇತ್ರಕ್ಕೆ ಮೀಸಲಿದ್ದು, ಈ ಹಿಂದಿನ ಆಡಳಿತ ಮಂಡಳಿಯಲ್ಲಿ ನಾಲ್ಕೂ ಸ್ಥಾನಗಳು ಒಂದೇ ಸಮುದಾಯಕ್ಕೆ ದೊರಕಿತ್ತು. ಆದರೆ ಈ ಬಾರಿ ಶಾಸಕ ಹರೀಶ್‌ಗೌಡ ಇಲ್ಲೂ ಸಾಮಾಜಿಕ ನ್ಯಾಯ ಎತ್ತಿ ಹಿಡಿದಿದ್ದಾರೆ. ಒಕ್ಕಲಿಗ ಸಮಾಜದ ಇಬ್ಬರು, ಒಬ್ಬ ಮರಾಠ ಸಮಾಜ ಮತ್ತು ಮತ್ತೊಂದು ಸ್ಥಾನ ಕುರುಬ ಸಮಾಜಕ್ಕೆ ನೀಡಿದರು.

ಬಿ ತರಗತಿ ವಿಭಾಗದಲ್ಲಿ ಇದ್ದ 8 ಸ್ಥಾನಗಳ ಪೈಕಿ ಹಿಂದುಳಿದ ವರ್ಗಕ್ಕೆ ಎರಡು ಸ್ಥಾನಗಳು ಮೀಸಲಿದ್ದವು. ಈ ಪೈಕಿ ಹಿಂದುಳಿವರ್ಗ ಎ ವರ್ಗಕ್ಕೆ ಗಾಣಿಗಸಮಾಜ ಮತ್ತು ಹಿಂದುಳಿದ ವರ್ಗ ಬಿ ಗುಂಪಿನಲ್ಲಿ ಒಕ್ಕಲಿಗ ಸಮಾಜಕ್ಕೆ ಅವಕಾಶ ನೀಡಿದರು. ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಸ್ಥಾನವನ್ನು ಒಬ್ಬ ಲಿಂಗಾಯತ ಸಮುದಾಯಕ್ಕೆ ನೀಡಿದರು. ಈ ರೀತಿಯಾಗಿ ಅಧಿಕಾರವನ್ನು ಎಲ್ಲ ಸಮುದಾಯಕ್ಕೆ ಹಂಚುವ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಧಾವಂತದಲ್ಲಿ ಕಾಂಗ್ರಸ್: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ ಎನ್ನುವುದನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರಕ್ಕೆ ಕಾಲಿಡಲು ಕಾಂಗ್ರೆಸ್‌ನ ತಾಲೂಕು ಘಟಕ ತೀವ್ರ ಪ್ರಯತ್ನ ನಡೆಸಿತ್ತು. ಆದರೆ ಒಂದು ಸ್ಥಾನವನ್ನೂ ಗಳಿಸಲಾಗದೆ ತೀವ್ರ ಮುಖಭಂಗ ಅನುಭವಿಸಿತು. ಸಹಕಾರ ಕ್ಷೇತ್ರದ ಒಳಹೊರಗು, ಆಳ ಅಗಲ ತಿಳಿದುಕೊಳ್ಳುವಲ್ಲಿ ವಿಫಲವಾದೆವೇನೋ ಎನ್ನುವುದು ಪಕ್ಷದ ಕಾರ್ಯಕರ್ತರ ಅಳಲಾಗಿತ್ತು.

ಸಾಮಾಜಿಕನ್ಯಾಯದ ಹರಿಕಾರರೆಂದೇ ಕರೆಯಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಹುಟ್ಟೂರಿನಲ್ಲಿ ಸಾಮಾಜಿಕ ನ್ಯಾಯವನ್ನು ಬಿಟ್ಟು ರಾಜಕಾರಣ ಮಾಡುವುದು ತರವಲ್ಲ ಎನ್ನುವುದು ನನ್ನ ಭಾವನೆ. ರಾಜಕೀಯ ಅಧಿಕಾರ ಎಲ್ಲ ಸಮಾಜದವರಿಗೂ ಅದರಲ್ಲೂ ಸೂಕ್ಷ್ಮಾತಿಸೂಕ್ಷ್ಮ ಸಮುದಾಯಗಳು ಮತ್ತು ಶೋಷಿತ ಸಮುದಾಯಕ್ಕೆ ಸಿಗಲೇಬೇಕು. ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ಪಕ್ಷಬೇಧ ಮರೆತು ಕಾರ್ಯ ನಿರ್ವಹಿಸುತ್ತಿದ್ದೇನೆ.

ಜಿ.ಡಿ.ಹರೀಶ್‌ಗೌಡ ಶಾಸಕ, ಹುಣಸೂರು

ಅರ್ಧ ಶತಮಾನಗಳ ಇತಿಹಾಸ ಹೊಂದಿರುವ ಟಿಎಪಿಸಿಎಂಎಸ್‌ನಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಅಧ್ಯಕ್ಷಗಾದಿಗೆ ನನ್ನನ್ನು ಕೂರಿಸಿ ದಾಖಲೆ ನಿರ್ಮಿಸಿದ್ದರು. ಕಳೆದ ಎರಡೂವರೆ ವರ್ಷಗಳಲ್ಲಿ ಇಂತಹ ಸಾಕಷ್ಟು ಉದಾಹರಣೆಗಳನ್ನು ನೀಡಬಹುದಾಗಿದೆ. ಸರ್ವಜನರನ್ನೂ ಒಂದಾಗಿ ಕರೆದುಕೊಂಡು ಹೋಗುವ ಅವರ ಮನೋಭಾವ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಪಕ್ಷ ಅಧಿಕಾರವಿಲ್ಲದೆಯೂ ತಾಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅನುದಾನಗಳನ್ನು ತರುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ

ಬಸವಲಿಂಗಯ್ಯ ಹಿರಿಯ ದಲಿತ ಮುಖಂಡ, ಹುಣಸೂರು