ಜಿಲ್ಲೆ

ಇಚ್ಛೆಗಳನಳಿದು ಮುಕ್ತವಾಗುವುದೇ ತಪಧರ್ಮ

ಬಸವರಾಜ ವೀರಪ್ಪ ಗರಗ

ಉಪ್ಪಿನಬೆಟಗೇರಿ: ಇಹದ ಬದುಕಿನ ವಿದ್ಯಮಾನಗಳು ಹುಟ್ಟುಹಾಕುವ ಇಚ್ಛೆಗಳನಳಿದು ಮನುಷ್ಯ ಮುಕ್ತನಾಗುವುದೇ ತಪಧರ್ಮವಾಗಿದೆ ಎಂದು ಲೇಖಕ ಡಾ. ಗುರುಮೂರ್ತಿ ಯರಗಂಬಳಿಮಠ ಪ್ರತಿಪಾದಿಸಿದರು.

ಸಮೀಪದ ಅಮ್ಮಿನಬಾವಿ ಗ್ರಾಮದ ಶ್ರೀ ನೇಮಿನಾಥ ಜಿನಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ದಶ ಲಕ್ಷಣ ಪರ್ವದ ಅಂಗವಾಗಿ ಉತ್ತಮ ತಪ ಧರ್ಮ ಸಮಾವೇಶದಲ್ಲಿ ಅವರು ಉಪನ್ಯಾಸ ನೀಡಿದರು. ಭಗವತ್ ಸಾನ್ನಿಧ್ಯದೊಂದಿಗೆ ನಡೆಸುವ ಧ್ಯಾನದ ಅನುಸಂಧಾನದಲ್ಲಿ ಎಲ್ಲ ದ್ವಂದ್ವ-ವೈರುಧ್ಯಗಳಿಂದ ಹೊರಬಂದು ಸಚ್ಚಿದಾನಂದ ಸ್ವರೂಪವಾದ ಚೈತನ್ಯದ ಮನಸಿನಾಚೆಯ ಭಾವ ಸಂಗಮದಲ್ಲಿ ಚಿದ್ಬೆಳಗನ್ನು ಕಾಣಲು ಹಂಬಲಿಸಲು ತಪ ಧರ್ಮವು ಮಾರ್ಗದರ್ಶಿಯಾಗಿದೆ ಎಂದರು.

ಮಾನವನ ಜೀವನ ವಿಧಾನದಲ್ಲಿ ಏಕಾಗ್ರತೆ, ತಲ್ಲೀನತೆ, ತನ್ಮಯತೆಯೊಂದಿಗೆ ಅಂತರಂಗ - ಬಹಿರಂಗ ಶುದ್ಧಿ ಸಾಧನೆಗೆ ತೊಡಗಿಸುವ ತಪಧರ್ಮವು, ಒಳಗಿನ ಬೆಳಗು ಪ್ರಜ್ವಲನಗೊಂಡು ಬಯಲ ಬೆಳಗಿನಲ್ಲಿ ಒಂದಾಗುವ ಮನುಕುಲದ ಅಂತಿಮ ಗುರಿ ಸಾಧನೆಗೆ ಮಾರ್ಗ ತೋರಿಸುತ್ತದೆ. ಮಾನವನು ಮಹಾತ್ಮನಾಗಲು, ಜೀವ ಜಿನನಾಗಲು ತುಳಿಯುವ ದಾರಿಗೆ ಮೇರು ಮೌಲ್ಯಗಳ ಬೆಳಕು ತುಂಬಿ ಕೈಹಿಡಿದು ಮುನ್ನಡೆಸುವ ಕೆಲಸವನ್ನು ತಪಧರ್ಮ ಮಾಡುತ್ತದೆ ಎಂದರು.

ಮಹಾವೀರ ಬಿ. ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಅಮ್ಮಿನಬಾವಿ ಗ್ರಾಪಂ ಮಾಜಿ ಅಧ್ಯಕ್ಷ ಪಿ.ಎಸ್. ಪತ್ರಾವಳಿ ಕಾರ್ಯಕ್ರಮ ಉದ್ಘಾಟಿಸಿದರು. ದೀಪಕ ದೇಸಾಯಿ, ಪಮ್ಮಣ್ಣ ಧಾರವಾಡ, ನೇಮಚಂದ್ರ ನವಲೂರ, ಶಂಕರ ರಾಘೂನವರ, ಈಶ್ವರ ಗಡೇಕಾರ, ಮಂಜುನಾಥ ಅಂಗಡಿ, ನೇಮಣ್ಣ ಧಾರವಾಡ ಹಾಗೂ ಮಂಜುನಾಥ ಸಿದ್ದಕ್ಕನವರ, ಇತರರಿದ್ದರು. ಅಧ್ಯಾಪಕಿ ಸುರೇಖಾ ಲೋಕೂರಬಾವಿ ಹಾಗೂ ಶಿಕ್ಷಕ ಮಹಾವೀರ ಅಣ್ಣಿಗೇರಿ ಕಾರ್ಯಕ್ರಮ ನಿರ್ವಹಿಸಿದರು.