ಜಿಲ್ಲೆ

ರಾಜ್ಯ ಮಟ್ಟದ ಜೂನಿಯರ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ನಲ್ಲಿ ‘ಚಿನ್ನದ ಮೀನು’ ಖ್ಯಾತಿಯ ತಾನ್ಯಾ ದಾಖಲೆ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ‘ಚಿನ್ನದ ಮೀನು’ ಖ್ಯಾತಿಯ ಈಜುಪಟು ಎಸ್.ತಾನ್ಯಾ ರಾಜ್ಯ ಮಟ್ಟದ ಜೂನಿಯರ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ದಾಖಲೆ ಮಾಡುವುದರೊಂದಿಗೆ 5 ಚಿನ್ನದ ಪದಕ ಪಡೆದು ಗಮನ ಸೆಳೆದಿದ್ದಾರೆ.

ವಿಶೇಷ ಎಂದರೆ ಬೆಂಗಳೂರಿನ ಬಸವನಗುಡಿ ಅಕ್ವಾಟಿಕ್ ಸೆಂಟರ್‌ನಲ್ಲಿ ಜು.9 ರಿಂದ 13ರವರೆಗೆ ನಡೆದ ಕರ್ನಾಟಕ ಈಜು ಸಂಘ ಆಯೋಜಿಸಿದ್ದ ಸ್ಪರ್ಧೆಯ ಗ್ರೂಪ್-1ಎ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಆಗಿ, ಅಹಮದಾಬಾದ್‌ನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಜೂನಿಯರ್ ಈಜು ಸ್ಪರ್ಧೆಗೂ ಆಯ್ಕೆಯಾಗಿದ್ದಾರೆ.

ತಾನ್ಯಾ ಅವರು 200 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ 2:40:26 ನಿಮಿಷದಲ್ಲಿ ಗುರಿ ತಲುಪುವ ಮೂಲಕ 2022ರ (ರಾಜ್ಯ - 2:40:53 ರಾಷ್ಟ್ರ - 2:40:36) ದಾಖಲೆ ಮುರಿದಿದ್ದಾರೆ. 400 ಮೀ. ಮಿಡ್ಲೆ ವಿಭಾಗದಲ್ಲಿ (ರಾಜ್ಯ-5:19:76 ರಾಷ್ಟ್ರ-5:11:77) ದಾಖಲೆ ಮುರಿದು 5:11:49 ನಿಮಿಷದಲ್ಲಿ ಗುರಿಮುಟ್ಟುವ ಮೂಲಕ ನೂತನ ದಾಖಲೆ ನಿರ್ಮಿಸಿದ್ದಾರೆ. 200 ಮೀ.ಮಿಡ್ಲೆ, 800 ಮೀ.ಫ್ರೀಸ್ಟೈಲ್ ಹಾಗೂ 1500 ಮೀ. ಫ್ರೀ ಸ್ಟೈಲ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಜೂನ್ 22 ರಿಂದ 26ರವರೆಗೆ ಭುವನೇಶ್ವರದಲ್ಲಿ ನಡೆದಿದ್ದ ಹಿರಿಯ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನ ವಿಭಾಗದಲ್ಲೂ ತಾನ್ಯಾ 1 ಬೆಳ್ಳಿ ಮತ್ತು 3 ಕಂಚಿನ ಪದಕ ಪಡೆದು ಗಮನ ಸೆಳೆಸಿದ್ದಾರೆ. ಇವರು ಜೈನ್ ಅಕಾಡೆಮಿ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್‌ನಲ್ಲಿ ಗಗನ್ ಉಲ್ಲಾಳ್‌ಮಠ್ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಜೈನ್ ದಿ ಸ್ಪೋರ್ಟ್ಸ್ ಸ್ಕೂಲ್‌ನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುತ್ತಾರೆ. ಇವರು ಮೈಸೂರಿನ ಜೆಪಿ ನಗರದ ಎಸ್.ಪಿ ಷಡಕ್ಷರಿ ಹಾಗೂ ಎನ್.ಶ್ವೇತಾ ಅವರ ಪುತ್ರಿ. ಈಕೆಯ ಸಾಧನೆಗೆ ಪಾಲಕರು, ತರಬೇತುದಾರರು ಶುಭ ಹಾರೈಸಿದ್ದಾರೆ.