ಜಿಲ್ಲೆ

ಟ್ಯೂಷನ್‌ಗೆ ಹೋಗದೇ ರಾಜ್ಯಕ್ಕೆ ಮೂರನೇ ರ‌್ಯಾಂಕ್

ವಿಜಯವಾಣಿ ವಿಶೇಷ ಬೆಳಗಾವಿ

ಯಾವುದೇ ಟ್ಯೂಷನ್‌ಗೂ ಹೋಗದೇ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 597 ಅಂಕ ಪಡೆದು ರಾಜ್ಯಕ್ಕೆ ಮೂರನೇ ಸ್ಥಾನ ಪಡೆದುಕೊಂಡಿದ್ದಾಳೆ ಬೆಳಗಾವಿ ಅನಗೋಳದ ಬುಡಾ ಕಾಲೋನಿಯ ಮೋಟಾರ್ ಡಿವೈಂಡಿಂಗ್ ಮೇಸ್ತ್ರಿ ಪುತ್ರಿ ತನ್ವಿ ಪಾಟೀಲ. ಮೂಲಕ ಬಡತನ ಸಾಧನೆಗೆ ಅಡ್ಡಿಯಲ್ಲ ಎಂದು ಸಾಧಿಸಿ, ಇತರರಿಗೂ ಮಾದರಿಯಾಗಿದ್ದಾಳೆ.

ಬೆಳಗಾವಿ ಕರ್ನಾಟಕ ಲಾ ಸೊಸೈಟಿಯ ಗೋಗಟೆ ಪದವಿಪೂರ್ವ ಕಾಲೇಜಿನಿ ವಿದ್ಯಾರ್ಥಿನಿ ತನ್ವಿ ಪಾಟೀಲ ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ ಶಾಸ್ತ್ರ, ಲೆಕ್ಕಶಾಸ್ತ್ರ, ಸಂಖ್ಯಾಶಾಸ್ತ್ರ, ಹಿಂದಿ ವಿಷಯಗಳಲ್ಲಿ 100 ಮತ್ತು ಇಂಗ್ಲಿಷ್‌ನಲ್ಲಿ 97 ಅಂಕ ಗಳಿಸಿದ್ದಾರೆ. ಮಧ್ಯಮ ವರ್ಗದಲ್ಲಿ ಜನಿಸಿ ಬಡತನ ಮಧ್ಯ ಬೆಳೆದ ತನ್ವಿ ಪಾಟೀಲ ತಂದೆ 30 ವರ್ಷಗಳಿಂದ ಮೋಟರ್ ರಿವೈಂಡಿಂಗ್ ಕೆಲಸ ಮಾಡುತ್ತಿದ್ದಾರೆ. ತನ್ನ ಓದು ತಂದೆಗೆ ಹೊರೆಯಾಗದಂತೆ ಯಾವುದೇ ಟ್ಯೂಷನ್ ಕ್ಲಾಸ್ ಹೋಗದೆ ಮನೆಯಲ್ಲಿ ಅಧ್ಯಯನ ಮಾಡಿದ್ದಾಳೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 618 ಅಂಕ ಪಡೆದು ರಾಜ್ಯಕ್ಕೆ ಟಾಪ್ ಹತ್ತರಲ್ಲಿ ರ‌್ಯಾಂಕ್ ಪಡೆದುಕೊಂಡಿದ್ದಳು. ಪ್ರಥಮ ಪಿಯುಸಿಯಲ್ಲಿ ಶೇ.98 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಳು. ತಾಯಿ ಸಂಗೀತಾ, ತಾಯಿ ಹೇಮಂತ ಪಾಟೀಲ ಮಗಳ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ಇದೀಗ ಪುತ್ರಿ ತನ್ವಿಯನ್ನು ಸಿಎ ಓದಿಸಬೇಕು ಎಂಬ ಏಕೈಕ ಉದ್ದೇಶದಿಂದ ತಮ್ಮ ಮನೆಯನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು 1.50 ಲಕ್ಷ ರೂ. ಸಾಲ ಪಡೆದು ಮಹಾರಾಷ್ಟ್ರದ ಪುಣೆಯಲ್ಲಿ ಸಿಎ ಕೋಚಿಂಗ್ ಕ್ಲಾಸ್‌ಗೆ ಸೇರಿಸಿದ್ದಾರೆ. ಇದೀಗ ಪುತ್ರಿಯ ದ್ವಿತೀಯ ಪಿಯುಸಿ ಮುಗಿದಿರುವ ಹಿನ್ನೆಲೆ ಮುಂದಿನ ಶಿಕ್ಷಣಕ್ಕೆ ಆರ್ಥಿಕ ತೊಂದರೆ ಎದುರಾಗಿದೆ. ಹೀಗಾಗಿ ಕಲಿಕೆಗೆ ಸಹಾಯ ಮಾಡುವವರು ಮೊ.ನಂ.9342661099ಕ್ಕೆ ಸಂಪರ್ಕಿಸಬಹುದು.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 3ನೇ ರ‌್ಯಾಂಕ್ ಬಂದಿರುವುದು ಬಹಳ ಖುಷಿ ತಂದಿದೆ. ನನ್ನ ತಂದೆ-ತಾಯಿ, ಶಿಕ್ಷಕರ ಸಹಕಾರದಿಂದ ಸಾಧನೆ ಮಾಡಲು ಸಾಧ್ಯವಾಗಿದೆ. ಓದುವ ಛಲವಿದ್ದರೆ ಬಡತನ ಅಡ್ಡಿ ಬರುವುದಿಲ್ಲ. ಸಿಎ ಮಾಡಬೇಕು ಎಂಬುದು ನನ್ನ ಮುಖ್ಯ ಗುರಿಯಾಗಿದ್ದು, ಅದನ್ನು ಸಾಧನೆ ಮಾಡುತ್ತೇನೆ ಎಂಬ ವಿಶ್ವಾಸ ಹಿಮ್ಮಡಿಗೊಳಿಸಿದೆ. -ತನ್ವಿ ಪಾಟೀಲ, ರ‌್ಯಾಜಕ್ಕೆ 3ನೇ ರ‌್ಯಾಂಕ್ ಪಡೆದ ವಿದ್ಯಾರ್ಥಿನಿ ಕಳೆದ 30 ವರ್ಷಗಳಿಂದ ಮೋಟರ್ ರಿವೈಂಡಿಂಗ್ ಉದ್ಯೋಗ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದೇನೆ. ಆದರೆ, ನನ್ನ ಮಕ್ಕಳ ಕಲಿಕೆಗೆ ಬಡತನ ಅಡ್ಡಿಯಾಗಿಲ್ಲ. ಇದೀಗ ಸಿಎ ಓದಿಸಲು ಮನೆ ಅಡವಿಟ್ಟು 1.50 ಲಕ್ಷ ರೂ. ಸಾಲ ಮಾಡಿದ್ದೇನೆ. ಮಕ್ಕಳು ಸಂತೋಷದಲ್ಲಿಯೇ ನಮ್ಮ ಬಡತನ, ಕಷ್ಟ, ನೋವುಗಳನ್ನು ಮರೆತು ಬಿಟ್ಟಿದ್ದೇವೆ. ಅವರ ಕಲಿಕೆಗೆ ಕೈಲಾದಷ್ಟು ಸಹಾಯ ಮಾಡುತ್ತಿದ್ದೇವೆ. - ಹೇಮಂತ ಪಾಟೀಲ, ತನ್ವಿ ತಂದೆ