ಜಿಲ್ಲೆ

ತನ್ವೀರ್ ಸೇಠ್ ಆಪ್ತನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ

Mysuru

ಮೈಸೂರು: ಬನ್ನಿಮಂಟಪದಲ್ಲಿ ನ.17 ರಂದು ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ತನ್ವೀರ್ ಸೇಠ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆಗೆ ಯತ್ನ ನಡೆಸಿದ್ದ ಘಟನೆ ಮಾಸುವ ಮುನ್ನವೇ ಗುರುವಾರ ರಾತ್ರಿ ತನ್ವೀರ್ ಸೇಠ್ ಆಪ್ತನ ಮೇಲೂ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಯರಗನಹಳ್ಳಿ ನಿವಾಸಿ, ಕಾಂಗ್ರೆಸ್ ಮುಖಂಡ ಅಣ್ಣಯ್ಯ ಹಲ್ಲೆಗೆ ಒಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಏನಿದು ಪ್ರಕರಣ: ಯರಗನಹಳ್ಳಿಯಲ್ಲಿ ಮಾರ್ಚ್ 10 ಮತ್ತು 11 ರಂದು ನಡೆಯುವ ಮಾರಿಹಬ್ಬ ಸಂಬಂಧ ಗ್ರಾಮಸ್ಥರು ಗುರುವಾರ ರಾತ್ರಿ ರಂಗ ಕುಣಿತ ಅಭ್ಯಾಸ ಮಾಡುತ್ತಿದ್ದರು. ಈ ವೇಳೆ ಕುಣಿತ ನಿಲ್ಲಿಸುವ ವಿಚಾರಕ್ಕೆ ಅಣ್ಣಯ್ಯ ಅವರ ಸಹೋದರ ರಘು ಮತ್ತು ಅದೇ ಗ್ರಾಮದ ಸಹೋದರರಾದ ಮಹದೇವ, ಚಿದಂಬರ್ ನಡುವೆ ಗಲಾಟೆಯಾಗಿದೆ. ಈ ವೇಳೆ ಮಧ್ಯ ಪ್ರವೇಶಿಸಿದ ಅಣ್ಣಯ್ಯ ಎಲ್ಲರನ್ನು ಸಮಾಧಾನ ಪಡಿಸಿ ನೃತ್ಯ ನಿಲ್ಲಿಸಿದ್ದಾರೆ.

ಇದರಿಂದ ಕೆರಳಿದ ಮಹದೇವ, ಚಿದಂಬರ್ ತಮ್ಮ ಬಳಿ ಇದ್ದ ಲಾಂಗ್‌ನಿಂದ ರಘು ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಆದರೆ, ಈ ವೇಳೆ ಅಣ್ಣಯ್ಯ ಅವರಿಗೆ ಲಾಂಗ್ ತಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಆಲನಹಳ್ಳಿ ಪೊಲೀಸರು, ಆರೋಪಿ ಮಹದೇವನನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಚಿದಂಬರ್ ಪತ್ತೆಗೆ ಬಲೆ ಬೀಸಿದ್ದಾರೆ.