ಸೋಮವಾರಪೇಟೆ: ಸಮೀಪದ ತಣ್ಣೀರುಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಪಾಲಕರ ಸಭೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಆರಂಭಿಸಲು ತೀರ್ಮಾನಿಸಲಾಯಿತು.
ಶಾಲೆಯಲ್ಲಿ ಪ್ರಸ್ತುತ 40 ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಸುಸಜ್ಜಿತ ಕಟ್ಟಡ, ನುರಿತ ಶಿಕ್ಷಕರು, ಮೂಲ ಸೌಲಭ್ಯವುಳ್ಳ ಶಾಲೆ ಹೆದ್ದಾರಿಗೆ ಹೊಂದಿಕೊಂಡಂತೆ ಜನವಸತಿ ಪ್ರದೇಶದಲ್ಲಿಯೇ ಇದೆ. ಇದನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಕನ್ನಡ ಮಾಧ್ಯಮದೊಂದಿಗೆ ಆಂಗ್ಲ ಮಾಧ್ಯಮವನ್ನೂ ಅಳವಡಿಸಿಕೊಳ್ಳಬೇಕೆಂದು ಬಹುತೇಕ ಪಾಲಕರು ಅಭಿಪ್ರಾಯ ವ್ಯಕ್ತಪಡಿಸಿದರು.
ಶಿಕ್ಷಕ ನಾಗೇಂದ್ರ ಮಾತನಾಡಿ, ಶಾಲೆಯಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ತರಗತಿಗಳನ್ನು ಆರಂಭಿಸಿದ್ದೇವೆ. ಇದೀಗ ಪಾಲಕರು ತಮ್ಮ ಮಕ್ಕಳಿಗೆ ಆಂಗ್ಲ ಶಿಕ್ಷಣದ ಅವಶ್ಯಕತೆಯಿರುವ ಬಗ್ಗೆ ಮನವಿ ಸಲ್ಲಿಸಿದ್ದು, ಅದರಂತೆ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ತೆರೆಯಲು ಕ್ರಮವಹಿಸಲಾಗುತ್ತಿದೆ. ಈಗಾಗಲೇ ಪಾಲಕರಿಂದ ಒಪ್ಪಿಗೆ ಪತ್ರಗಳನ್ನು ಪಡೆಯಲಾಗಿದೆ. ಸುಸಜ್ಜಿತ ಕಟ್ಟಡವೂ ಲಭ್ಯವಿದೆ. 20 ಮಕ್ಕಳು ಎಲ್‌ಕೆಜಿ ಸೇರ್ಪಡೆಯಾಗುವ ಹಂತದಲ್ಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಅನುಮತಿ ನಂತರ ತರಗತಿಗಳಿಗೆ ದಾಖಲಾತಿ ಆರಂಭಿಸಲಾಗುವುದು ಎಂದರು.
ನೇರುಗಳಲೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಲೋಕಾನಂದ ಮಾತನಾಡಿ, ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಹೊಂದಿರುವ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಿರುವುದು ವಿಷಾದನೀಯ. ಇದನ್ನು ಮನಗಂಡು ಶಾಲಾಭಿವೃದ್ಧಿ ಸಮಿತಿ, ಪಾಲಕರು, ಸ್ಥಳೀಯ ಜನಪ್ರತಿನಿಧಿಗಳ ಸಹಕಾರದೊಂದಿಗೆ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಲು ಕ್ರಮವಹಿಸಲಾಗಿದೆ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದು ಮನವಿ ಮಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ನೇರುಗಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನೋದ್‌ಕುಮಾರ್ ಮಾತನಾಡಿ, ಬಡ ಹಾಗೂ ಮಧ್ಯಮ ವರ್ಗದ ಜನರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಆಕಾಂಕ್ಷೆ ಹೊಂದಿದ್ದರೂ ಆರ್ಥಿಕ ಪರಿಸ್ಥಿತಿಯಿಂದ ಸಾಧ್ಯವಾಗುವುದಿಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಅನಿವಾರ್ಯವೂ ಆಗಿದೆ. ಈ ಹಿನ್ನೆಲೆಯಲ್ಲಿ ತಣ್ಣೀರುಹಳ್ಳ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ನೀಡಿದರೆ ಹೆಚ್ಚು ಉಪಯೋಗವಾಗಲಿದೆ. ಇದಕ್ಕೆ ಬೇಕಾದ ಎಲ್ಲ ಸಹಕಾರವನ್ನು ಗ್ರಾ.ಪಂ.ನಿಂದ ನೀಡಲಾಗುವುದು ಎಂದು ಭರವಸೆ ನೀಡಿದರು. ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಜಲಜಾಕ್ಷಿ, ಸದಸ್ಯರಾದ ಪ್ರವೀಣ್, ಕವಿತಾ, ಅಶ್ವಿನಿ, ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಮಂಜುನಾಥ್, ಪ್ರಮುಖರಾದ ಉಷಾ ರವೀಂದ್ರ, ಅರೆಯೂರು ಸಂದೀಪ್, ಎಚ್.ಕೆ.ಲೋಕೇಶ್, ರಫೀಕ್, ದಿವಾಕರ, ಎಸ್‌ಡಿಎಂಸಿ ಅಧ್ಯಕ್ಷ ತಿಮ್ಮಪ್ಪ, ಶಾಲಾ ಮುಖ್ಯಶಿಕ್ಷಕಿ ಶಾಂತಮ್ಮ, ಸಹಶಿಕ್ಷಕಿ ವಿಮಲಾ, ಎಸ್‌ಡಿಎಂಸಿ ಸದಸ್ಯರು ಇದ್ದರು.