ಜಿಲ್ಲೆ

ಬೆಳೆಗಳಿಗೆ ನೀರುಣಿಸಲು ಅನಿವಾರ್ಯವಾಗಿ ಟ್ಯಾಂಕರ್ ಗಳ ಮೊರೆ

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ಮಳೆಯ ಅಭಾವದಿಂದ ಬರ ವಾತಾವರಣ ನಿರ್ಮಾಣವಾಗಿರುವುದರ ನಡುವೆ ಸಾಲಸೋಲ ಮಾಡಿ ಬೆಳೆದಂತಹ ಬೆಳೆಗಳಿಗೆ ನೀರುಣಿಸಲು ರೈತರು, ಅನಿವಾರ್ಯವಾಗಿ ದುಬಾರಿ ಟ್ಯಾಂಕರ್ ಗಳ ಮೊರೆ ಹೋಗಬೇಕಾದ ದುಸ್ಥಿತಿ ಉಂಟಾಗಿದೆ.

ಹಾಲು ಉತ್ಪಾದನೆ, ರೇಷ್ಮೆ, ತರಕಾರಿಗಳನ್ನು ಬೆಳೆಯುವುದರಲ್ಲಿ ಮುಂಚೂಣಿಯಲ್ಲಿರುವ ಈ ಭಾಗದಲ್ಲಿ ಬರವು ಆಗಾಗ ಕಾಡುತ್ತಿರುತ್ತದೆ. ಹಿಂದಿನ ವರ್ಷಗಳ ಮಾದರಿಯಲ್ಲಿ ಈ ಬಾರಿಯೂ ನಾನಾ ಸಮಸ್ಯೆಗಳು ನಿಧಾನವಾಗಿ ಗೋಚರವಾಗುತ್ತಿವೆ. ಅದರಂತೆ ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆ, ತಿಪ್ಪೇನಹಳ್ಳಿ, ನಂದಿ, ಮಂಡಿಕಲ್, ದಿಬ್ಬೂರು ಸೇರಿದಂತೆ ಹಲವು ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಮಳೆಯಾಶ್ರಿತ ಕೃಷಿ ಜಮೀನುಗಳಿಗೆ ಟ್ಯಾಂಕರ್ ನೀರು ಹರಿಸಲಾಗುತ್ತಿದೆ. ಇದರಿಂದ ಬಿಸಿಲಿಗೆ ಉಷ್ಣಾಂಶ ಹೆಚ್ಚಳದಿಂದ ಹಾಳಾಗುವ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಮಾಡಲಾಗುತ್ತಿದೆ.

ಅನೇಕ ಕಡೆ ರೈತರು ಪ್ರತಿನಿತ್ಯ ಕೃಷಿ ಹೊಂಡಗಳನ್ನು ಮೂರ್ನಾಲ್ಕು ಟ್ಯಾಂಕರ್ ನೀರಿನಿಂದ ತುಂಬಿಸಿಕೊಳ್ಳುತ್ತಿದ್ದಾರೆ. ಹನಿ ನೀರಾವರಿ ಪದ್ದತಿ ಮೂಲಕ ಬಳಿಕ ಚೆಂಡೂ ಹೂ, ಗುಲಾಬಿ, ಚಾಮಂತಿ, ಕ್ಯಾರೆಟ್ ಸೇರಿದಂತೆ ಇತರೆ ಬೆಳೆಗಳಿಗೆ ನೀರನ್ನು ಹರಿಸುತ್ತಿದ್ದಾರೆ. ಮತ್ತೆ ಕೆಲವರು ನೇರವಾಗಿ ಪೈಪ್‌ಗಳನ್ನು ಹಿಡಿದು ಗಿಡಗಳಿಗೆ ನೀರುಣಿಸುತ್ತಿದ್ದಾರೆ. ಇದಕ್ಕೆ ಮಳೆಯ ಆಭಾವ, ವಿದ್ಯುತ್ ಕಣ್ಣಾ ಮುಚ್ಚಾಲೆ ಮತ್ತು ಕಡಿಮೆ ವೋಲ್ಟೇಜ್ ಕಾರಣವಾಗಿದೆ ಎಂಬ ಅಳಲು ಕೇಳಿ ಬಂದಿದೆ.

*ಬೆಳೆಗಳಿಗೆ ನೀರಿನ ಅಭಾವ ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಕೊಟ್ಟಿದೆ. ಆಗಾಗ ಸುಡು ಬಿಸಿಲು, ಹೆಚ್ಚಿಗೆ ಮೋಡ ಮುಸುಕಿದ ವಾತಾವರಣ ಕಂಡು ಬರುತ್ತಿವೆ. ಇದರ ನಡುವೆ ತುಂತುರು ಹನಿಗಳ ಸಿಂಚನದ ಅಸಮರ್ಪಕ ಮಳೆಯು ಬಿತ್ತನೆ ಕಾರ್ಯ ಕುಂಠಿತಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಉಳಿದಿರುವ ಬೆಳೆಗಳನ್ನು ಉಳಿಸಿಕೊಳ್ಳಲು ನೀರಿನ ಅಭಾವ ಉಂಟಾಗುತ್ತಿದೆ. ಇದು ಹೂವು, ತರಕಾರಿಯ ಮೇಲೂ ಮಳೆ ಅಭಾವ ದುಷ್ಪರಿಣಾಮ ಬೀರಿದೆ. ಪ್ರಸ್ತುತ ಕೊಳವೆ ಬಾವಿಯಲ್ಲಿನ ನೀರು ದಿನದಿಂದ ದಿನಕ್ಕೆ ಇಂಗಿ ಹೋಗುತ್ತಿದೆ. ಇರುವ ಅಲ್ಪಸ್ವಲ್ಪ ನೀರನ್ನು ವಿದ್ಯುತ್ ಸಮಸ್ಯೆಯಿಂದ ಬಳಸಿಕೊಳ್ಳಲು ಆಗುತ್ತಿಲ್ಲ. 1500 ಅಡಿ ಆಳದ ಕೊಳವೆ ಬಾವಿಯಿಂದ ನೀರನ್ನು ಮೇಲೆತ್ತಲು ಕನಿಷ್ಠ 250 ರಿಂದ 400 ವೋಲ್ಟೇಜ್ ಇರಬೇಕು. ಆದರೆ, 150 ರಿಂದ 180 ರೊಳಗಿನ ವೊಲ್ಟೇಜ್ ಇರುತ್ತದೆ. ಲೋಡ್ ಶೆಡ್ಡಿಂಗ್ ಸಮಸ್ಯೆ ಬೇರೆ. ಇದಕ್ಕೆ ತಲಾ 550 ರಿಂದ 800 ರೂ ಪಾವತಿಸಿ ಟ್ಯಾಂಕರ್ ನೀರನ್ನು ಖರೀದಿಸಬೇಕಾಗಿದೆ.

  • ಕೃಷಿ ಜಮೀನಿನಲ್ಲಿ ಬೆಳೆದಿರುವ ರಾಗಿ ಬೆಳೆಯು ಒಣಗಿ ಹೋಗುತ್ತಿದೆ. ಇದನ್ನು ಉಳಿಸಿಕೊಳ್ಳಲು ಪ್ರತಿನಿತ್ಯ ಟ್ಯಾಂಕರ್ ನೀರನ್ನು ಬಳಸಲಾಗುತ್ತಿದೆ.

ನಾರಾಯಣಸ್ವಾಮಿ, ರೈತ, ನಂದಿ