ಜಿಲ್ಲೆ

ಆಸಿಡ್ ತುಂಬಿದ್ದ ಟ್ಯಾಂಕರ್ ಪಲ್ಟಿ, ಆತಂಕಗೊಂಡ ಸ್ಥಳೀಯರು , ಪೊಲೀಸರು ಬಂದ ಮೇಲೆ ನಿಟ್ಟುಸಿರು ಬಿಟ್ಟರು…

ಅಂಕೋಲಾ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಕಂಚಿನಬಾಗಿಲ ಸಮೀಪದ ನವಗದ್ದೆಯಲ್ಲಿ ಆಂದ್ರದಿಂದ ಗೋವಾ ಕಡೆಗೆ ತೆರಳುತ್ತಿದ್ದ ಸಲ್ಪುರಿಕ್ ಆಸಿಡ್ ತುಂಬಿದ್ದ ಟ್ಯಾಂಕರ್ ಮಗುಚಿ ಬಿದ್ದು ಅದರಲ್ಲಿದ್ದ ಆಸಿಡ್ ಸೋರಿಕೆಯಾಗಿ ಗಟಾರಕ್ಕೆ ಸೇರಿದ ಘಟನೆ ಶುಕ್ರವಾರ ನಡೆದಿದೆ.


ಆಂದ್ರದಿಂದ ಯಲ್ಲಾಪುರ ಮಾರ್ಗವಾಗಿ ಅಂಕೋಲಾದಿಂದ ಕಾರವಾರ ಮೂಲಕ 34 ಟನ್ ಆಸಿಡ್ ತುಂಬಿಕೊಂಡು ಗೋವಾಕ್ಕೆ ತೆರಳುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ತಿರುವಿನಲ್ಲಿ ಮಗುಚಿ ಬಿದ್ದಿದೆ. ಬಿದ್ದ ತೀವ್ರತೆಗೆ ಟ್ಯಾಂಕ್​ನಿಂದ ಆಸಿಡ್ ಸೋರಿಕೆಯಾಗಿದೆ. ಇದು ಗ್ಯಾಸ್ ಟ್ಯಾಂಕರ್ ಆಗಿದ್ದು, ಗ್ಯಾಸ್ ಸೋರಿಕೆಯಾಗುತ್ತಿದೆ ಎಂದು ತಿಳಿದು ಅಕ್ಕಪಕ್ಕದ ಜನರು ಆತಂಕಕ್ಕೊಳಗಾಗಿದ್ದರು.


ವಿಷಯ ತಿಳಿದ ತಕ್ಷಣ ಪೊಲೀಸ್ ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದು ಗ್ಯಾಸ್ ಟ್ಯಾಂಕರ್ ಅಲ್ಲ. ಆಸಿಡ್ ತುಂಬಿದ ಟ್ಯಾಂಕರ್. ಇದು ಸೋರಿಕೆಯಾದರೆ ಯಾವುದೇ ಅಪಾಯವಿಲ್ಲ ಎಂದು ಹೇಳಿದ ನಂತರ ಸ್ಥಳೀಯರು ನಿಟ್ಟುಸಿರು ಬಿಟ್ಟರು. ಘಟನೆಯಲ್ಲಿ ಟ್ಯಾಂಕರ್ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ತಹಸೀಲ್ದಾರ್ ಅನಂತ ಶಂಕರ, ಪಿಎಸ್​ಐ ಉದ್ದಪ್ಪ ಧರೆಪ್ಪನವರ ಇತರ ಸಿಬ್ಬಂದಿ ಭೇಟಿ ನೀಡಿದರು.