ವಿಜಯವಾಣಿ ಸುದ್ದಿಜಾಲ ಕುಂದಾಪುರ
ಕುಂದಾಪುರ ಪುರಸಭೆಗೆ ಕೊನೆಗೂ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಮೀಸಲಾತಿ ಪ್ರಕಟವಾಗಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷೆ ಸ್ಥಾನಗಳಿಗೆ ಪೈಪೋಟಿ ಗರಿಗೆದರಿದ್ದು, ಕುತೂಹಲ ಮೂಡಿಸಿದೆ.
ಕುಂದಾಪುರ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಮೀಸಲಾತಿ ಬಂದಿದೆ. ಈ ಮೊದಲು ಸಾಮಾನ್ಯ ಮಹಿಳೆ ಅಧ್ಯಕ್ಷತೆಗೆ, ಉಪಾಧ್ಯಕ್ಷತೆಗೆ ಹಿಂದುಳಿದ ವಿಭಾಗದ ಎ ವರ್ಗದವರಿಗೆ ಮೀಸಲಾತಿ ಪ್ರಕಟವಾಗಿತ್ತು. ಅಂತೆಯೇ, 2018ರಲ್ಲಿ ಚುನಾವಣೆ ನಡೆದು 2.2 ವರ್ಷಗಳ ಕಾಯುವಿಕೆ ಬಳಿಕ 2020ರಲ್ಲಿ ನಡೆದ ಪುರಸಭೆ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವೀಣಾ ಭಾಸ್ಕರ್ ಹಾಗೂ ಉಪಾಧ್ಯಕ್ಷರಾಗಿ ಸಂದೀಪ್ ಖಾರ್ವಿ ಅವಿರೋಧವಾಗಿ ಆಯ್ಕೆಯಾಗಿದ್ದರು.
ಈಗಾಗಲೇ 12 ಮಂದಿ ಇದ್ದು, ಈ ಪೈಕಿ ಉಪಾಧ್ಯಕ್ಷ ಸ್ಥಾನ ಮಹಿಳೆಯರಿಗೆ ಮೀಸಲಾದ ಕಾರಣ 6 ಮಂದಿ ಕೈ ಬಿಡಲಾಗುತ್ತದೆ. ಉಳಿದ 6 ಪುರುಷರು ಪರಿಗಣನೆಗೆ ಒಳಪಡಲಿದ್ದು, ಈ ಪೈಕಿ ಇಬ್ಬರು ತಲಾ ಒಂದೊಂದು ವರ್ಷಕ್ಕೆ ಸ್ಥಾಯಿ ಸಮಿತಿಗೆ ಆಯ್ಕೆಯಾಗುತ್ತಾರೆ. ಉಳಿದ ನಾಲ್ವರಿಗೆ ಅಧಿಕಾರ ಸಿಗದಿದ್ದು, ಸಂತೋಷ್ ಶೆಟ್ಟಿ, ಪ್ರಭಾಕರ್ ವಿ, ಶ್ರೀಕಾಂತ್ ಮೂವರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಶೆಟ್ಟಿ, ದೇವಾಡಿಗ, ಎಸ್‌ಟಿ ಸಮುದಾಯಕ್ಕೆ ಈವರೆಗೆ ಮೀಸಲಾತಿ ಮೂಲಕ ಅಧ್ಯಕ್ಷತೆ ದೊರೆಯಲಿಲ್ಲ. ಈ ಮೂರು ಸಮುದಾಯದ ಸದಸ್ಯರಿದ್ದಾರೆ. ಹಾಗಾಗಿ ಅವರನ್ನು ಪರಿಗಣಿಸಲಾಗುವುದೇ ಎನ್ನುವ ಕುತೂಹಲವೂ ಇದೆ.
2018ರ ಆಗಸ್ಟ್ 31ರಂದು ಪ್ರಕಟಗೊಂಡ ಫಲಿತಾಂಶ ಪ್ರಕಾರ ಒಟ್ಟು 23 ಸದಸ್ಯರಲ್ಲಿ ಬಿಜೆಪಿ 14 ಮತ್ತು 8 ಕಾಂಗ್ರೆಸ್, ಪಕ್ಷೇತರ ಸದಸ್ಯರೊಬ್ಬರು ಆಯ್ಕೆಯಾಗಿದ್ದಾರೆ. ಬಿಜೆಪಿಯಲ್ಲಿ 6 ಮಹಿಳೆಯರು, 8 ಪುರುಷರು ಇದ್ದು, ಇದರಲ್ಲಿ ಮೀಸಲಾತಿ ಪ್ರಕಾರ 6 ಮಂದಿ ಅಧ್ಯಕ್ಷತೆಗೆ ಹಾಗೂ ಉಪಾಧ್ಯಕ್ಷತೆ ಹುದ್ದೆಗೆ ಅರ್ಹರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವ ಕಾರಣ ಅನುದಾನ ತರುವ ಸವಾಲು ನೂತನ ಅಧ್ಯಕ್ಷ, ಉಪಾಧ್ಯಕ್ಷರ ಹೆಗಲ ಮೇಲಿದೆ. ಅರ್ಧದಲ್ಲಿ ಬಾಕಿಯಾದ ಕಾಮಗಾರಿಗಳನ್ನು ಗುರಿ ತಲುಪಿಸುವ ಮಹತ್ತರ ಜವಾಬ್ದಾರಿಯೂ ಇದೆ.
ಮೋಹನದಾಸ ಶೆಣೈ ಹಿರಿಯ ಸದಸ್ಯರಾಗಿದ್ದು, ಈ ಬಾರಿ ಅಧ್ಯಕ್ಷತೆ ಹುದ್ದೆಯ ರೇಸ್‌ನಲ್ಲಿ ಇವರ ಹೆಸರು ಮುಂಚೂಣಿಯಲ್ಲಿದೆ. 2009ರಿಂದ 5 ವರ್ಷ ಅಧ್ಯಕ್ಷರಾಗಿದ್ದ ಸಂದರ್ಭ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ನಾಂದಿ ಹಾಡಿದ್ದು, ಸಾಕಷ್ಟು ಅನುದಾನಗಳನ್ನೂ ತಂದಿದ್ದರು. ಈ ಬಾರಿ 14 ತಿಂಗಳಷ್ಟೆ ಅಧಿಕಾರದಲ್ಲಿರುವುದರಿಂದ ಜನರ ಪರ ಪೂರಕ ವಾತಾವರಣ ನಿರ್ಮಿಸುವ ಸವಾಲು ನೂತನ ಅಧ್ಯಕ್ಷರ ಹೆಗಲೇರಲಿದೆ. ರೇಸ್‌ನಲ್ಲಿ ಸಂತೋಷ್ ಶೆಟ್ಟಿ, ಪ್ರಭಾಕರ್ ವಿ., ಶೇಖರ್ ಪೂಜಾರಿ, ಗಿರೀಶ್ ದೇವಾಡಿಗ, ಶ್ರೀ ಕಾಂತ್ ಹೆಸರುಗಳೂ ಇದ್ದು, ಪಕ್ಷ ಅಚ್ಚರಿ ಎಂಬಂತೆ ಬೇರೊಬ್ಬರಿಗೂ ಮಣೆ ಹಾಕಬಹುದು.
ಉಪಾಧ್ಯಕ್ಷತೆ ಹುದ್ದೆ ಮಹಿಳೆಯರಿಗೆ ಮೀಸಲಾತಿಯಾಗಿದ್ದು, 6 ಸದಸ್ಯರ ಪೈಕಿ ಈಗಾಗಲೇ ಅಧ್ಯಕ್ಷರಾದವರನ್ನು ಕೈಬಿಟ್ಟರೆ 5 ಆಕಾಂಕ್ಷಿಗಳು ಉಪಾಧ್ಯಕ್ಷತೆ ಹುದ್ದೆಗೆ ಪೈಪೋಟಿ ನಡೆಸಬೇಕಾಗುತ್ತದೆ. ಅರ್ಹರ ಪಟ್ಟಿಯಲ್ಲಿ ಅಶ್ವಿನಿ ಪ್ರದೀಪ್, ರೋಹಿಣಿ ಉದಯ್, ಶ್ವೇತಾ ಸಂತೋಷ್, ವನಿತಾ ಬಿಲ್ಲವ, ಪ್ರೇಮಲತಾ ಹೆಸರು ಇದ್ದು, ಈ ಪೈಕಿ ಅಶ್ವಿನಿ, ವನಿತಾ, ಶ್ವೇತಾ ನಡುವೆ ತೀವ್ರ ಪೈಪೋಟಿ ನಡೆಯಲಿದೆ.