ಬೆಟ್ಟದಪುರ ಸಮೀಪದ ಅತ್ತಿಗೋಡು ಗ್ರಾಮದಲ್ಲಿ ತಂದ್ರಮ್ಮ ದೇವಿಯ ವಾರ್ಷಿಕ ಸಿಡಿ ಮಹೋತ್ಸವ ಗುರುವಾರ ವಿಜೃಂಭಣೆಯಿಂದ ನೆರವೇರಿತು. 
ಜಿಲ್ಲೆ

ತಂದ್ರಮ್ಮ ದೇವಿ ಸಿಡಿ ಮಹೋತ್ಸವ

ಶಿವಶಂಕರ್ ಎಂ. ಹೆಬ್ಬಳ್ಳ

ಬೆಟ್ಟದಪುರ: ಬೆಟ್ಟದಪುರ ಸಮೀಪದ ಅತ್ತಿಗೋಡು ಗ್ರಾಮದಲ್ಲಿ ತಂದ್ರಮ್ಮ ದೇವಿಯ ವಾರ್ಷಿಕ ಸಿಡಿ ಮಹೋತ್ಸವ ಗುರುವಾರ ವಿಜೃಂಭಣೆಯಿಂದ ನೆರವೇರಿತು.

ಪ್ರತಿ ವರ್ಷವೂ ದೀಪಾವಳಿ ಹಬ್ಬದ ಮರುದಿನ ಈ ಉತ್ಸವವನ್ನು ಆಚರಿಸುವುದು ಸಂಪ್ರದಾಯವಾಗಿದ್ದು, ಏಳು ಕೋಮಿನ ಜನತೆ ಒಟ್ಟಾಗಿ ಸೇರಿ ಒಗ್ಗಟ್ಟಿನಿಂದ ಆಚರಣೆ ಮಾಡುವುದು ಇಲ್ಲಿನ ವಿಶೇಷ. ಅತ್ತಿಗೋಡು ಗ್ರಾಮದ ಬಸವೇಶ್ವರ ದೇವಾಲಯದ ಬಳಿ ಆರಂಭಗೊಂಡ ಉತ್ಸವ ಸಮೀಪದ ತಂದ್ರೆಗುಡಿ ಕೊಪ್ಪಲು ಗ್ರಾಮದಲ್ಲಿರುವ ತಂದ್ರಮ್ಮ ದೇವಾಲಯದವರೆಗೂ ಸಿಡಿ ಎಳೆಯುವ ಮೂಲಕ ಸಂಪನ್ನವಾಯಿತು. ಉತ್ಸವ ಸಾಗುವ ದಾರಿಯಲ್ಲಿ ವಿವಿಧ ರೀತಿಯ ರಂಗೋಲಿಗಳು ಕಂಗೊಳಿಸುತ್ತಿದ್ದವು. ಈಡುಗಾಯಿ ಹಾಕುವ ಮೂಲಕ ಭಕ್ತಾದಿಗಳು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಜಾತ್ರಾ ಮಹೋತ್ಸವದಲ್ಲಿ ಅತ್ತಿಗೋಡು, ಕಳ್ಳಿಕೊಪ್ಪಲು, ಕಗ್ಗಲಿ ಕೊಪ್ಪಲು, ಚಿಕ್ಕೇಗೌಡನಕೊಪ್ಪಲು, ಮಾದೇಶ್ವರ ಮಠ, ಮಠದ ಕೊಪ್ಪಲು ಭಕ್ತರು ಇದ್ದರು.

ಸಿಡಿ ವಿಶೇಷ: ಎರಡು ಚಕ್ರಗಳುಳ್ಳ ಗಾಡಿಯ ದೂರಿಗೆ ಲಂಬವಾಗಿ ಒಂದು ಕಂಬವನ್ನು ಮಧ್ಯದಲ್ಲಿ ನಿಲ್ಲಿಸಿ, ಮತ್ತೊಂದು ಕಂಬವನ್ನು ಅಡ್ಡಲಾಗಿ ಕಟ್ಟಲಾಗುತ್ತದೆ. ನಂತರ ವಿವಿಧ ಬಗೆಯ ಹೂವಿನ ಮಾಲೆಗಳಿಂದ ಹಾಗೂ ತಳಿರು ತೋರಣಗಳಿಂದ ಅಲಂಕರಿಸಿ ರಥದ ಮಾದರಿಯಲ್ಲಿಯೇ ಎಳೆದೊಯ್ಯುವಂತೆ ತಯಾರು ಮಾಡಲಾಗುತ್ತದೆ. ಇದರಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ಎಳೆದೊಯ್ಯಲಾಗುತ್ತದೆ.