ಜಿಲ್ಲೆ

ಜಿಲ್ಲಾದ್ಯಂತ ತಂಪೆರದ ಮಳೆ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಕಳೆದ ಕೆಲ ದಿನಗಳಿಂದ ಬಿಸಿಲಿನ ಝಳಕ್ಕೆ ಬಸವಳಿದಿದ್ದ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಬುಧವಾರ ತಡರಾತ್ರಿಯಿಂದ ಬೆಳಗ್ಗೆಯವರಗೆ ಸುರಿದ ಜಿಟಿಜಿಟಿ ಮಳೆ ಕೊಂಚಮಟ್ಟಿಗೆ ತಂಪೆರದಿದೆ.

ಬುಧವಾರ ಬೆಳಗ್ಗೆ ಬಿಸಿಲಿನ ತಾಪಮಾನ ಅಷ್ಟಾಗಿ ಕಂಡುಬರಲಿಲ್ಲವಾದರೂ, ಅದರ ಝಳ ಮಾತ್ರ ನಗರ ಸೇರಿ ಜಿಲ್ಲೆಯ ಜನರ ಬೆವರಿಳಿಸುತ್ತಿತ್ತು. ಸಂಜೆಯಾಗುತ್ತಿದ್ದಂತೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಮಧ್ಯರಾತ್ರಿ ಗುಡುಗು ಸಹಿತ ಮಳೆ ಆರಂಭವಾಗಿದೆ. ಆರಂಭದಲ್ಲಿ ಸ್ವಲ್ಪ ಹೊತ್ತು ಜೋರಾಗಿ ಸುರಿದ ಮಳೆ, ಬಳಿಕ ಬೆಳಗ್ಗೆವರೆಗೂ ಒಂದೇ ಸಮನೆ ಜಿಟಿಜಿಟಿಯಾಗಿ ಸುರಿಯಿತು.

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಎಲ್‌ಎಲ್‌ಸಿ ಹಾಗೂ ಎಚ್‌ಎಲ್‌ಸಿ ಕಾಲುವೆ ಭಾಗದಲ್ಲಿ ಬೆಳೆದಿರುವ ಭತ್ತ ಕಟಾವು ಹಂತಕ್ಕೆ ಬಂದಿದ್ದು ಕೆಲವಡೆ ಗಾಳಿ ಮಳೆಯಿಂದ ಭತ್ತಕ್ಕೆ ನೆಲಕ್ಕೆ ಉರುಳಿದೆ. ಕೆಲವೊಂದು ಗ್ರಾಮಗಳಲ್ಲಿ ರಸ್ತೆ ಮೇಲೆ ಮಳೆ ನೀರು ಹರಿದು ವಾಹನ ಸವಾರರು ಸಂಚಾರಿಸಲು ಪರದಾಡಿದರು. ರಾತ್ರಿಯಿಡಿ ಸುರಿದ ಪರಿಣಾಮ ಮುಂಜಾಗ್ರತೆ ಕ್ರಮವಾಗಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಡಿತಗೊಳಿಸಲಾಗಿತ್ತು.

ಎಲ್ಲೆಲ್ಲಿ ಎಷ್ಟು : ಬಳ್ಳಾರಿ 3 ಮಿ.ಮೀ., ಸಂಡೂರು 10.1 ಮಿ.ಮೀ., ಸಿರಗುಪ್ಪ 3.2 ಮಿ.ಮೀ., ಕುರುಗೋಡು 17.6 ಮಿ.ಮೀ., ಕಂಪ್ಲಿ 9.9 ಮಿ.ಮೀ. ಸೇರಿದಂತೆ ಒಟ್ಟಾರೆ ಜಿಲ್ಲಾದ್ಯಂತ 7.4 ಮಿ.ಮೀ. ಮಳೆ ಸುರಿದಿದೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ಪರಮೇಶ್ವರ ತಿಳಿಸಿದರು.