ಜಿಲ್ಲೆ

ತಮಿಳುನಾಡಿನ ಬಸ್‌ಗೆ ₹41,160 ದಂಡ!

ಎನ್.ವೆಂಕಟೇಶ್

ತೆರಿಗೆ ಪಾವತಿಸದೆ ರಾಜ್ಯದಲ್ಲಿ ಸಂಚಾರ ಟ್ಯಾಕ್ಸಿ ಯೂನಿಯನ್‌ನಿಂದ ವಾಹನಕ್ಕೆ ತಡೆ ಸ್ಥಳೀಯ ಚಾಲಕರಿಂದ ಆರ್‌ಟಿಒ ನಿರ್ಲಕ್ಷ್ಯ ಆರೋಪ

ಚಿಂತಾಮಣಿ: ವಾಣಿಜ್ಯ ನಗರಿ ಚಿಂತಾಮಣಿಗೆ ರಾತ್ರೋರಾತ್ರಿ ಹೊರರಾಜ್ಯದ ಟಿಟಿ ವಾಹನಗಳು, ಲಾರಿಗಳು ಹಾಗೂ ಇತರ ಬಸ್‌ಗಳು ತೆರಿಗೆ ಪಾವತಿಸದೆ ಬರುತ್ತಿದ್ದರೂ ಸಾರಿಗೆ ಇಲಾಖೆ (ಆರ್‌ಟಿಒ) ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದು ನಾಚಿಕೆಗೇಡಿನ ಸಂಗತಿ ಎಂದು ಸ್ಥಳೀಯ ಟ್ಯಾಕ್ಸಿ ಚಾಲಕರು ಆರೋಪಿಸಿದ್ದಾರೆ.

ಬುಧವಾರ ರಾತ್ರಿ 8 ಗಂಟೆ ಸಮಯದಲ್ಲಿ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿಯಿಂದ ಶಬರಿಮಲೆಗೆ ಯಾತ್ರಿಕರನ್ನು ಕರೆದುಕೊಂಡು ಹೋಗಲು ರಾಜ್ಯದ ಅನುಮತಿ ಹಾಗೂ ತೆರಿಗೆ ಪಾವತಿ ಮಾಡದೆ ಅಕ್ರಮವಾಗಿ ಬಂದಿದ್ದ ಖಾಸಗಿ ಬಸ್ ಒಂದನ್ನು ಸ್ಥಳೀಯ ಕರ್ನಾಟಕ ಟ್ಯಾಕ್ಸಿ ಡ್ರೈವರ್ ಟ್ರೇಡ್ ಯೂನಿಯನ್ ಪದಾಧಿಕಾರಿಗಳು ತಡೆದು 112ಕ್ಕೆ ಕರೆ ಮಾಡಿ ಅಕ್ರಮವಾಗಿ ರಾಜ್ಯವನ್ನು ಪ್ರವೇಶಿಸಿರುವ ಬಗ್ಗೆ ಪೊಲೀಸರು ಹಾಗೂ ಆರ್‌ಟಿಒ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಕಚೇರಿಗೆ ರಜೆ ಇದ್ದುದರಿಂದ ಅಧಿಕಾರಿಗಳು ಸಿಗದ ಹಿನ್ನೆಲೆಯಲ್ಲಿ ಚಿಂತಾಮಣಿ-ಮದನಪಲ್ಲಿ ರಸ್ತೆಯ ತಾಡಿಗೋಳ್ ಕ್ರಾಸ್‌ನಲ್ಲಿರುವ ಆರ್‌ಟಿಒ ಚೆಕ್‌ಪೋಸ್ಟ್ ಸಿಬ್ಬಂದಿಗೆ ಬಸ್ ಅನ್ನು ಒಪ್ಪಿಸಿ 41,160 ರೂ. ದಂಡ ಹಾಕಿಸಿದ್ದು, ಈ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಬೇಕಾದ ಆದಾಯವನ್ನು ತಲುಪಿಸಿದ್ದಾರೆ. ಅಲ್ಲದೆ, ಸಾರಿಗೆ ಅಧಿಕಾರಿಗಳು ಮಾಡಬೇಕಾದ ಕೆಲಸ ಮಾಡಿ ಮಾದರಿಯಾಗಿದ್ದಾರೆ.

ಯೂನಿಯನ್‌ನ ಪದಾಧಿಕಾರಿ ಸಂಪತ್ ಕುಮಾರ್ ಮಾತನಾಡಿ, ರಾಜ್ಯಕ್ಕೆ ಪ್ರತಿನಿತ್ಯ ಹೊರ ರಾಜ್ಯದ ಹಲವಾರು ವಾಹನಗಳು ಅನುಮತಿ ಪಡೆಯದೆ ಪ್ರವೇಶಿಸುತ್ತಿದ್ದು, ಆರ್‌ಟಿಒ ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ಆರೋಪಿಸಿದರು. ಬುಧವಾರ ರಾತ್ರಿ ತಮಿಳುನಾಡಿಗೆ ಸೇರಿದ ಖಾಸಗಿ ಬಸ್ ಶಬರಿಮಲೆ ಯಾತ್ರಿಕರನ್ನು ಕರೆದೊಯ್ಯಲು ಬಂದಿದ್ದಾಗ ತಡೆದು ಆರ್‌ಟಿಒ ಅಧಿಕಾರಿಗೆ ಕರೆ ಮಾಡಿ ವಿಷಯ ತಿಳಿಸಿದರೂ ಸ್ಪಂದಿಸಲಿಲ್ಲ ಎಂದು ದೂರಿದರು.

ಯೂನಿಯನ್ ಪದಾಧಿಕಾರಿಗಳಾದ ರಘುಪತಿ, ಭರತ್, ನೌಷಾದ್, ಗಣೇಶ್, ಶ್ರೀನಿವಾಸ್, ಶಿವಕುಮಾರ್, ಜೈರಾಮ್ ಎಂ.ಎಸ್, ಗಜೇಂದ್ರ, ನವೀನ್, ವೆಂಕಿ, ರಮೇಶ್, ಕೈವಾರ ಮುರಳಿ, ಶಿವ, ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.

ತೆರಿಗೆ ಅನ್ಯಾಯ ತಡೆಯಲಿ

ತಾಲೂಕಿನಲ್ಲೂ ಹೊರ ರಾಜ್ಯದ ಹಲವಾರು ವಾಹನಗಳು ಅನುಮತಿ ಸಂಚರಿಸುತ್ತಿದ್ದರೂ, ಸ್ಥಳೀಯ ಎಆರ್‌ಟಿಒ ಅಧಿಕಾರಿಗಳು ಅಂತಹ ವಾಹನಗಳನ್ನು ತಪಾಸಣೆ ಮಾಡುತ್ತಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಿ ರಾಜ್ಯಕ್ಕೆ ಅನ್ಯಾಯವಾಗುತ್ತಿರುವ ತೆರಿಗೆಯನ್ನು ಪಾವತಿ ಮಾಡಬೇಕು ಎಂದು ಸಂಪತ್‌ಕುಮಾರ್ ಆಗ್ರಹಿಸಿದರು.