ಮಳವಳ್ಳಿ ಪಟ್ಟಣದ ಪುರಸಭೆ ಕಚೇರಿಗೆ ಸೋಮವಾರ ಲೋಕಾಯುಕ್ತ ಡಿವೈಎಸ್ಪಿ ಸುನೀಲ್‌ಕುಮಾರ್ ದಿಢೀರ್ ಭೇಟಿ ನೀಡಿ ಪುರಸಭೆ ಮುಖ್ಯಾಧಿಕಾರಿ ಎಚ್.ಆರ್.ದೀಪಾ ಅವರಿಂದ ಮಾಹಿತಿ ಪಡೆದುಕೊಂಡರು. ಸದಸ್ಯರಾದ ಕೃಷ್ಣ, ಪ್ರಶಾಂತ್, ರವಿ, ಶಿವಸ್ವಾಮಿ ಇದ್ದರು. 
ಜಿಲ್ಲೆ

ತಾಪಂ, ಪುರಸಭೆಯ ಕಡತ ಪರಿಶೀಲಿಸಿದ ಲೋಕಾಯುಕ್ತ

ಮಳವಳ್ಳಿ: ಸಾರ್ವಜನಿಕರು ನೀಡಿದ ದೂರುಗಳ ಹಿನ್ನೆಲೆಯಲ್ಲಿ ಸೋಮವಾರ ಲೋಕಾಯುಕ್ತ ಅಧಿಕಾರಿಗಳು ಪಟ್ಟಣದ ತಾಲೂಕು ಪಂಚಾಯಿತಿ ಮತ್ತು ಪುರಸಭೆ ಕಾರ್ಯಾಲಯಗಳಿಗೆ ದಿಢೀರ್ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿದರು.

ಲೋಕಾಯುಕ್ತ ಡಿವೈಎಸ್‌ಪಿ ಸುನೀಲ್‌ಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ಆಗಮಿಸಿ ಎರಡೂ ಕಚೇರಿಗಳಲ್ಲಿ ವಿವಿಧ ದಾಖಲೆಗಳನ್ನು ಜಾಲಾಡುವ ಮೂಲಕ ಮಾಹಿತಿ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಪುರಸಭೆ ಸದಸ್ಯ ಪ್ರಶಾಂತ್ ಮಾತನಾಡಿ, ಪುರಸಭೆ ಕಾರ್ಯಾಲಯದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಅವರನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಲೋಕಾಯುಕ್ತ ಡಿವೈಎಸ್ಪಿ ಗೆ ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಡಿವೈಎಸ್ಪಿ ಸುನೀಲ್‌ಕುಮಾರ್, ದಲ್ಲಾಳಿಗಳನ್ನು ಹತ್ತಿಕ್ಕಲು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಬೇಕು. ಸಾರ್ವಜನಿಕರು ತಾಪಂ ಮತ್ತು ಪುರಸಭೆಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ದೂರು ಸಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ಇಲ್ಲಿನ ಕಚೇರಿಗಳಿಗೆ ಭೇಟಿ ದೂರಿನ ವಿಷಯಕ್ಕೆ ಸಂಬಂಧಿಸಿದಂತೆ ಇಒ ಮತ್ತು ಮುಖ್ಯಾಧಿಕಾರಿಯಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ದೂರಿಗೆ ಸಂಬಂಧಿಸಿದಂತೆ ಪೂರಕ ದಾಖಲೆ ಪರಿಶೀಲನೆ ನಡೆಸುವುದರ ಜತೆಗೆ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದರು.
ಮುಖ್ಯಾಧಿಕಾರಿ ಎಚ್.ಆರ್.ದೀಪಾ, ಸದಸ್ಯರಾದ ಕೃಷ್ಣ, ಪ್ರಶಾಂತ್, ರವಿ, ಶಿವಸ್ವಾಮಿ ಇದ್ದರು.