ಜಿಲ್ಲೆ

ತಲವಾರು ಹೊಂದಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ

Mangaluru - Nishantha Narayana

ಪುತ್ತೂರು: ಬೊಳುವಾರಿಲ್ಲಿ ಸೋಮವಾರ ರಾತ್ರಿ ವ್ಯಕ್ತಿಯೊಬ್ಬ ತಲವಾರು ತೆಗೆದುಕೊಂಡು ಹೋಗುವ ಸಂದರ್ಭ ಸಾರ್ವಜನಿಕರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಕಲೇಶಪುರ ಮೂಲದ ರಾಜೇಶ್ ಶೆಟ್ಟಿ ತಲವಾರನ್ನು ಹರಿತ ಮಾಡುವ ಉದ್ದೇಶಕ್ಕೆ ಅಕ್ಕಸಾಲಿಗನಲ್ಲಿಗೆ ತೆಗೆದುಕೊಂಡು ಹೋಗಿದ್ದು, ಅದನ್ನು ಬೆನ್ನಿಗೆ ಸಿಕ್ಕಿಸಿಕೊಂಡು ಬರುವ ಸಂದರ್ಭ ಕೈಯಲ್ಲಿದ್ದ ಬೀಡಿ ಬಿದ್ದ ಕಾರಣ ಎತ್ತಲು ಬಗ್ಗಿದಾಗ ತಲವಾರು ಎಲ್ಲರಿಗೆ ಕಾಣಿಸಿಕೊಂಡಿದೆ. ಇದರಿಂದ ಭಯಗೊಂಡ ಸಾರ್ವಜನಿಕರು ಆತನನ್ನು ಹಿಡಿದುಕೊಂಡಿದ್ದಾರೆ. ಪೊಲೀಸರು ಆಗಮಿಸಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ ಶಸ್ತ್ರಾಸ್ತ್ರ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಜೇಶ್ ಶೆಟ್ಟಿ ಪತ್ನಿ ಕೊಡಾಜೆಯವಳಾಗಿದ್ದು, ಆತನ ಸಹೋದರಿ ಮನೆ ಬನ್ನೂರಿನಲ್ಲಿದೆ ಎಂದು ಹೇಳಲಾಗಿದೆ. ಇಲ್ಲಿಂದ ತಲವಾರನ್ನು ಮೊನಚುಗೊಳಿಸುವ ಉದ್ದೇಶಕ್ಕೆ ತಂದಿರುವ ಸಾಧ್ಯತೆಯಿದೆಂದು ಹೇಳಲಾಗಿದೆ.