ಜಿಲ್ಲೆ

ಮೂಲ ಸೌಕರ್ಯವಂಚಿತ ತಾಲೂಕು ಕ್ರೀಡಾಂಗಣ

ಪ್ರಸಿನ್ ಕೆ.ಆರ್

ಶೇಖರ್ ಸಂಕೋಡನಹಳ್ಳಿ ಅರಸೀಕೆರೆ

ಯವಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಿರ್ಲಕ್ಷೃದಿಂದಾಗಿ ತಾಲೂಕು ಕ್ರೀಡಾಂಗಣ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು, ಕ್ರೀಡಾ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ರಾಷ್ಟ್ರೀಯ ಹಾಗೂ ನಾಡಹಬ್ಬಗಳ ಆಚರಣೆ ವೇಳೆ ನೂರಾರು ಶಾಲಾ ವಿದ್ಯಾರ್ಥಿಗಳು ಬಿಸಿಲು ಮಳೆಯ ನಡುವೆಯೇ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕಾಗಿದೆ.

25 ವರ್ಷಗಳ ಹಿಂದೆ ಜೇನುಕಲ್ ನಗರ ಬಡಾವಣೆ ವ್ಯಾಪ್ತಿಗೆ ಹೊಂದಿಕೊಂಡಂತೆ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ಅಂದಿನ ಶಾಸಕರಾಗಿದ್ದ ಜಿ.ಎಸ್.ಪರಮೇಶ್ವರಪ್ಪ ಉತ್ಸುಕತೆ ತೋರಿದ್ದು, ಜಾಗ ಕೊಡಿಸುವ ಜತೆಗೆ ಅಗತ್ಯ ಅನುದಾನವನ್ನು ಕೊಡಿಸುವಲ್ಲಿ ಸಾಕಷ್ಟು ಶ್ರಮಿಸಿದ್ದರು. ಆದರೆ, ಕ್ರೀಡಾಂಗಣ ನಿರ್ಮಾಣವಾಗಿ ದಶಕಗಳು ಕಳೆದರೂ ಕೂಡ ಶುದ್ದ ಕುಡಿಯುವ ನೀರು, ಶೌಚಗೃಹ, ವಿಶ್ರಾಂತಿ ಕೊಠಡಿ ಒಳಗೊಂಡಂತೆ ಅಗತ್ಯ ಮೂಲ ಸೌಕರ್ಯಗಳಿಲ್ಲದೆ ಕ್ರೀಡಾಪಟುಗಳು ಮಕ್ಕಳು ಪರದಾಡುವಂತಾಗಿದೆ.

ಇರುವ ಶೌಚಗೃಹ ಕೂಡ ಬಳಕೆಗೆ ಲಭ್ಯ ಇರದ ಕಾರಣ ಮಲ, ಮೂತ್ರ ವಿಸರ್ಜನೆಗೆ ಬಯಲಿಗೆ ತೆರಳುವ ಸನ್ನಿವೇಶ ಏರ್ಪಟ್ಟಿದೆ.

ರಾಜಕೀಯ ಸಭೆ, ಸಮಾರಂಭಗಳ ಜತೆಗೆ ರಾಷ್ಟ್ರೀಯ ಹಾಗೂ ನಾಡ ಹಬ್ಬಗಳ ಆಚರಣೆ ವೇಳೆ ಕ್ರೀಡಾಂಗಣದ ಶುಚಿತ್ವಕ್ಕೆ ಒತ್ತು ನೀಡುವ ಅಧಿಕಾರಿಗಳು ನಂತರ ಇತ್ತ ತಲೆಹಾಕುವುದಿಲ್ಲ ಎನ್ನುವ ದೂರುಗಳಿವೆ. ಪ್ರತಿನಿತ್ಯ ಬೆಳಗ್ಗೆ ವಾಯು ವಿಹಾರಕ್ಕೆ ಕ್ರಿಕೆಟ್, ಅಥ್ಲೆಟಿಕ್, ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಲು ನೂರಾರು ಕ್ರೀಡಾಪಟುಗಳು ಭಾಗವಹಿಸುತ್ತಾರೆ. ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಗಳ ಇದೆ ಮೈದಾನದಲ್ಲಿ ಆಯೋಜನೆಗೊಳ್ಳುತ್ತಿದ್ದು, ಬಾಲಕ, ಬಾಲಕಿಯರು, ಶಿಕ್ಷಕರು ಸಾಕಷ್ಟು ಸಮಸ್ಯೆ ಅನುಭವಿಸುವಂತಾಗಿದೆ.

ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಜೇನುಕಲ್ ಕ್ರೀಡಾಂಗಣದ ಅಭಿವೃದ್ಧಿಗೆ 2 ಕೋಟಿ ರೂ.ಅನುದಾನ ಬಿಡುಗಡೆ ಮಾಡಿದ್ದರು. ಈ ಸಂದರ್ಭದಲ್ಲಿ ಶೆಲ್ಟರ್ ನಿರ್ಮಾಣ ಹೊರತು ಪಡಿಸಿದರೆ ಬೇರೆ ಅಭಿವೃದ್ಧಿ ಕೆಲಸ ಕಲ್ಪಿಸಲಾಗಿಲ್ಲ. ಕ್ರೀಡಾಂಗಣದ ಗ್ಯಾಲರಿಗೆ ತಗಡಿನ ಶೀಟ್, ಸುತ್ತಲು ಮುಳ್ಳು ತಂತಿ ಬೇಲಿ, ಕ್ರೀಡಾಕೂಟ ವೀಕ್ಷಿಸಲು ಅನುಕೂಲವಾಗುವಂತೆ ಸೋಪಾನ ಮೆಟ್ಟಿಲು ನಿರ್ಮಿಸಲಾಗಿದೆ. ಆದರೆ ಶೌಚಗೃಹ, ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸದಿರುವುದು ಕ್ರೀಡಾಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

ಕ್ರೀಡಾಂಗಣಕ್ಕೆ ಹೊಂದಿಕೊಂಡಂತೆ ಸಮರ್ಪಕ ಚರಂಡಿ ನಿರ್ಮಾಣ ಮಾಡದಿರುವ ಹಿನ್ನಲೆ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಮೈದಾನ ತುಂಬೆಲ್ಲ ನೀರು ನಿಂತು ಕೆರೆಯಂತಾಗುತ್ತದೆ. ಒಂದು ಬಾರಿ ಮಳೆ ಬಂದರೆ ವಾರಗಟ್ಟಲೆ ಕ್ರೀಡಾಕೂಟ ನಡೆಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ರಾಷ್ಟ್ರೀಯ ಹಬ್ಬಗಳ ಸಂದರ್ಭ ಕೆಸರಿನ ಮಧ್ಯೆಯೇ ಮಕ್ಕಳು ನಿಂತು ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕಾಗಿದೆ. ಸಂಬಂಧ ಪಟ್ಟವರು ಗಮನ ಹರಿಸಿ ಮೈದಾನಕ್ಕೆ ಶಾಶ್ವತ ಕಾಯಕಲ್ಪ ಕಲ್ಪಿಸಬೇಕು ಎಂಬೂದು ಕ್ರೀಡಾಸಕ್ತರ ಒತ್ತಾಯವಾಗಿದೆ.