ಮಂಡ್ಯ: ವಿದ್ಯಾರ್ಥಿಗಳಿಗೆ ಸಾಧನೆ ಮಾಡುವ ಛಲವಿರಲಿ ಎಂದು ಶಿಕ್ಷಣ ಇಲಾಖೆ ಕ್ಷೇತ್ರ ಸಮನ್ವಯ ಅಧಿಕಾರಿ ಶಿವರಾಂ ಅಭಿಪ್ರಾಯಪಟ್ಟರು.
ತಾಲೂಕಿನ ವಿ.ಸಿ ಫಾರ್ಮ್ ಮಹಾವಿದ್ಯಾಲಯ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಉತ್ತರ ವಲಯ, ದೈಹಿಕ ಶಿಕ್ಷಣ ವಿಭಾಗ ಸಹಯೋಗದೊಂದಿಗೆ ಆಯೋಜಿಸಿದ್ದ ಉತ್ತರ ವಲಯ ವ್ಯಾಪ್ತಿಯ ಪ್ರೌಢಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಭಾಗವಹಿಸುವುದರ ಮೂಲಕ ಸೋಲು ಗೆಲುವಿನ ಲೆಕ್ಕಾಚಾರವಿಲ್ಲದೆ ಮುಂದೆ ಸಾಗಬೇಕು. ವಿದ್ಯಾರ್ಥಿಗಳು ಗೆಲ್ಲುವ ವಿಶ್ವಾಸದಿಂದಲೇ ಮುನ್ನುಗಬೇಕು. ಆಗ ಮಾತ್ರ ಗೆಲುವು ನಮ್ಮದಾಗುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವದು ಕೂಡ ಪರೀಕ್ಷೆ ಇದ್ದಂತೆ. ಕ್ರೀಡಾ ಕ್ಷೇತ್ರದಲ್ಲಿಯೂ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ. ಆ ಮೂಲಕ ಭವಿಷ್ಯ ರೂಪಿಸಿಕೊಳ್ಳುವ ಕಡೆ ವಿದ್ಯಾರ್ಥಿಗಳು ಸಾಗಬೇಕು. ಗೆಲುವು-ಸೋಲು ಸಾಮಾನ್ಯ. ಗೆದ್ದಾಗ ಹಿಗ್ಗದೆ ಸೋತಾಗ ಕುಗ್ಗದೆ ಕೇವಲ ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಗೋಪಿನಾಥ್ ಮಾತನಾಡಿ, ಶಾಲೆಗಳಲ್ಲಿ ಕ್ರೀಡೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚಿರುತ್ತವೆ. ವಿದ್ಯಾರ್ಥಿಗಳು ಓದುವ ಜತೆಗೆ ತಮಗಿಷ್ಟವಾದ ಪಠೇತರ ಚಟುವಟಿಕೆಗಳಲ್ಲಿ ಭಾಗವಹಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರಸ್ತುತದಲ್ಲಿ ಕ್ರೀಡಾಕೂಟ ಆಯೋಜಿಸಿದ್ದು, ಹೋಬಳಿ ಮಟ್ಟದಿಂದ ತಾಲೂಕು ಮಟ್ಟಕ್ಕೆ ಬಂದಿದ್ದೀರಿ. ಇಲ್ಲೂ ಕೂಡ ಜಯಗಳಿಸಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವ ಗುರಿ ಇಟ್ಟುಕೊಳ್ಳಬೇಕೆಂದು ತಿಳಿಸಿದರು.
ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ವಸಂತ್‌ಕುಮಾರ್, ಕಾರ್ಯದರ್ಶಿ ಬೋರೇಗೌಡ, ಕೆ.ಸಿ.ಗೋವಿಂದ, ತಾಲೂಕು ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಎಂ.ಮಾದೇಶ್, ಕೆ.ಎಸ್.ರಾಮಸಂಜೀವಯ್ಯ, ಕಾರ್ಯದರ್ಶಿ ಎಂ.ಶ್ರೀನಿವಾಸ್, ಡಿ.ಸಿ.ಕಾಸಯ್ಯ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಎಸ್.ವಿಜಯಕುಮಾರ್ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಿದವರಿಗೆಲ್ಲ ಊಟ ಮತ್ತು ಇತರೆ ಸೌಕರ್ಯ ವೆಚ್ಚ ನೀಡಿದ ನಿಜಗುಣ ಅವರನ್ನು ಸನ್ಮಾನಿಸಲಾಯಿತು.