ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ 48 ಗ್ರಾಮ ಪಂಚಾಯಿತಿ ಮೂಲಕ ಜಲಜೀವನ ಮಿಷನ್ ಯೋಜನೆಯಲ್ಲಿ 87.50 ಕೋಟಿ ರೂ.ವೆಚ್ಚದ ಕಾಮಗಾರಿ ಅನುಷ್ಠಾನ ಮಾಡಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಈ ಯೋಜನೆಯಲ್ಲಿ ಮನೆ ಮನೆಗೆ ಕುಡಿಯುವ ನೀರು ಒದಗಿಸುವುದು ಪ್ರಮುಖ ಉದ್ದೇಶವಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಸೋಮವಾರ ಬೆಳ್ತಂಗಡಿಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ನಡೆದ ಜಲಜೀವನ ಮಿಷನ್ ಯೋಜನೆಯ ಕಾಮಗಾರಿಗಳ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಬಹುಗ್ರಾಮ ಯೋಜನೆಯಲ್ಲಿ ಇಳಂತಿಲದಿಂದ ಆರಂಭಗೊಂಡು 13 ಗ್ರಾ.ಪಂ ವ್ಯಾಪ್ತಿಯಲ್ಲಿ ಕುಡಿಯವ ನೀರು ಒದಗಿಸುವ ಯೋಜನೆ ನಡೆಯುತ್ತಿದೆ. ಅಲಂಕಾರಿನಲ್ಲಿ ಆಗುತ್ತಿರುವ ಬಹುಗ್ರಾಮ ಯೋಜನೆಯಲ್ಲಿ 4 ಗ್ರಾ.ಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಸಲಾಗುವುದು. ಉಳಿದ ಗ್ರಾಮಗಳಲ್ಲಿ ಜಲಜೀವನ ಮಿಷನ್ ಕಾಮಗಾರಿ ನಡೆಯುತ್ತಿದೆ. ಜಲಜೀವನ ಮಿಷನ್ ಕಾಮಗಾರಿಯಲ್ಲಿ ಆಗುತ್ತಿರುವ ವಿಳಂಬ, ಇದರ ತಾಂತ್ರಿಕ ಸಮಸ್ಯೆ ಹಾಗೂ ಗುತ್ತಿಗೆದಾರು ಸಮರ್ಪಕವಾಗಿ ಕಾಮಗಾರಿ ನಿರ್ವಹಿಸಲು ಆಗುತ್ತಿರುವ ತೊಂದರೆಗಳ ಬಗ್ಗೆ ಇಂದಿನ ಸಭೆಯಲ್ಲಿ ಅವಲೋಕನ ನಡೆಸಲಾಗುವುದು. ಕಾಲಮಿತಿಯಲ್ಲಿ ತಾಲೂಕಿನಲ್ಲಿ ಎಲ್ಲ ಕಾಮಗಾರಿಯನ್ನು ಪೂರ್ತಿಗೊಳಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ದ.ಕ ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿಭಾಗೀಯ ಅಭಿಯಂತ ರಘುನಾಥ್ ಮಾತನಾಡಿ, ಜಲಜೀವನ ಮಿಷನ್ ಯೋಜನೆಗೆ ಕೇಂದ್ರ ಸರ್ಕಾರ ಶೇ.50 ಹಾಗೂ ರಾಜ್ಯ ಸರ್ಕಾರ ಶೇ.50 ಅನುದಾನ ನೀಡುತ್ತಿದ್ದು, ಬೆಳ್ತಂಗಡಿ ತಾಲೂಕಿನಲ್ಲಿ ಜಲಜೀವನ ಮಿಷನ್ ಯೋಜನೆಯಲ್ಲಿ 71 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 21 ಕಾಮಗಾರಿಗಳು ಪೂರ್ತಿಗೊಂಡಿವೆ. 59 ಕಾಮಗಾರಿಗಳಿಗೆ ವಿದ್ಯುತ್ ಸಂಪರ್ಕ ಆಗಬೇಕಿದ್ದು, ಇದರಲ್ಲಿ 22 ಕಾಮಗಾರಿ ಪೂರ್ತಿಗೊಂಡಿದೆ. 37ಕಾಮಗಾರಿ ಪ್ರಗತಿಯಲ್ಲಿದೆ ಬೆಳ್ತಂಗಡಿ ತಾಲೂಕಿನಲ್ಲಿ ಮುಂದಿನ ಮಾರ್ಚ್ ಒಳಗೆ ಎಲ್ಲ ಕಾಮಗಾರಿಯನ್ನು ಪೂರ್ತಿಗೊಳಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದರು. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಜಗದೀಪ್ ಜೆ. ಶೆಠೆ ಪೂರಕ ಮಾಹಿತಿ ನೀಡಿದರು.
ಮಾರ್ಚ್ 15ರೋಳಗೆ ಪೂರ್ತಿಗೊಳಿಸಿ
ಜಲಜೀವನ ಮಿಷನ್ ಯೋಜನೆಯಲ್ಲಿ ಬೆಳ್ತಂಗಡಿ ತಾಲೂಕಿನ 48 ಗ್ರಾಪಂಗಳಲ್ಲಿ ಇದುವರೆಗೆ ನಡೆದ ಕಾಮಗಾರಿಗಳ ಬಗ್ಗೆ ಶಾಸಕರು ಪ್ರಗತಿ ಪರಿಶೀಲನೆ ನಡೆಸಿದರು. ಪ್ರತಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ತಮ್ಮ ಗ್ರಾ.ಪಂ ವ್ಯಾಪ್ತಿಯಲ್ಲಿ ಆದ ಕಾಮಗಾರಿಗಳ ಪ್ರಗತಿಯ ವಿವರಗಳು, ಬಾಕಿಯಾದ ಕಾಮಗಾರಿಗಳು ಹಾಗೂ ಜನರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಕಾಮಗಾರಿ ಬಾಕಿಯಾಗಿರುವ ಬಗ್ಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಂದ ಮಾಹಿತಿಯನ್ನು ಪಡೆದ ಶಾಸಕರು ಮುಂದಿನ ಮಾರ್ಚ್ 15ರ ಒಳಗೆ ಎಲ್ಲ ಕಾಮಗಾರಿಗಳನ್ನು ಪೂರ್ತಿಗೊಳಿಸುವಂತೆ ಸೂಚನೆ ನೀಡಿದರು. ಕೆಲವೊಂದು ಕಡೆಗಳಲ್ಲಿ ಎರಡು ವರ್ಷ ಕಳೆದರೂ ಪೈಪ್‌ಲೈನ್ ಮಾಡದ ಹಾಗೂ ಕಾಮಗಾರಿಯನ್ನು ಆರಂಭಿಸಲು ಕ್ರಮ ಕೈಗೊಳ್ಳದ ಅಧಿಕಾರಿ ಹಾಗೂ ಗುತ್ತಿಗೆದಾರರನ್ನು ಶಾಸಕರು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.