ಕಂಪ್ಲಿ: ತಾಲೂಕು ಮಟ್ಟದ ಎಲ್ಲ ಕಚೇರಿಗಳನ್ನು ಆರಂಭಿಸಬೇಕೆಂದು ಆಗ್ರಹಿಸಿ ಇಲ್ಲಿನ ಕಂಪ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ(ಪಕ್ಷಾತೀತ)ದ ಪದಾಧಿಕಾರಿಗಳು ಗುರುವಾರ ಶಾಸಕ ಜೆ.ಎನ್.ಗಣೇಶ್‌ಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಅನ್ಯಧರ್ಮೀಯರ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಿ: ಪ್ರಧಾನಿ ಮೋದಿಗೆ ಈಶ್ವರಪ್ಪ ಮನವಿ
ಒಕ್ಕೂಟದ ಅಧ್ಯಕ್ಷ ಜಿ.ಜಿ.ಚಂದ್ರಣ್ಣ ಮಾತನಾಡಿ, ತಾಲೂಕು ಕೇಂದ್ರವಾಗಿ ಆರು ವರ್ಷ ಕಳೆದರೂ ತಾಲೂಕು ಕಚೇರಿಗಳು ಆರಂಭಗೊಳ್ಳದೆ ಜನರಿಗೆ ತೊಂದರೆಯಾಗಿದೆ.
ಜನತೆ ಕುರುಗೋಡು, ಸಿರಗುಪ್ಪ, ಬಳ್ಳಾರಿಗಳಿಗೆ ಅಲೆದಾಡುವಂತಾಗಿದೆ. ಇದರಿಂದ ಸಾರ್ವಜನಿಕ ಕೆಲಸಗಳಿಗೆ ಸಮಯ, ಹಣ ಖರ್ಚಾಗುತ್ತಿದೆ. ಜನರ ಬಾಗಿಲಿಗೆ ಆಡಳಿತ ಸೇವೆ ಒದಗಿಸುವ ತಾಲೂಕು ಕೇಂದ್ರ ಆಶಯ ಈಡೇರದಂತಾಗಿದೆ.
ಬಿಇಒ, ಬಸ್ ಡಿಪೋ, ಅಗ್ನಿಶಾಮಕ ಠಾಣೆ, ಸಿಡಿಪಿಒ, ಪಿಡಬ್ಲುೃಡಿ ಎಇಇ ಕಚೇರಿ, ಸಮಾಜ ಕಲ್ಯಾಣಾಧಿಕಾರಿ, ಪ್ರಾದೇಶಿಕ ಅರಣ್ಯಾಧಿಕಾರಿ, ತಾಲೂಕು ಕ್ರೀಡಾಂಗಣ, ತಾಂತ್ರಿಕ ಮಹಾವಿದ್ಯಾಲಯ, ನ್ಯಾಯಾಲಯ ಸೇರಿ 16 ಕಚೇರಿಗಳನ್ನು ಆರಂಭಿಸಲು ಶಾಸಕರು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಬಸ್ ಡಿಪೋ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆಗ್ನಿ ಶಾಮಕದಳ ಠಾಣೆ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಬಿಇಒ ಸೇರಿ ತಾಲೂಕು ಮಟ್ಟದ ಕಚೇರಿಗಳ ಆರಂಭಕ್ಕೆ ಸರ್ಕಾರ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.
ಪ್ರಮುಖರಾದ ಜಿ.ರಾಮಣ್ಣ, ಬಿ.ಸಿದ್ದಪ್ಪ, ಕೆ.ಎಸ್.ಚಾಂದ್‌ಬಾಷಾ, ಡಾ.ಎ.ಸಿ.ದಾನಪ್ಪ, ಬಿ.ದೇವೇಂದ್ರ, ಬಿ.ಜಾಫರ್, ಕರೇಕಲ್ ಮನೋಹರ, ವೀರಾಂಜನೇಯಲು, ಎಲ್.ಭಗವಾನ್, ಎ.ಹನುಮಂತ ಇತರರಿದ್ದರು.