ಜಿಲ್ಲೆ

ತಾಲೂಕು ಆಸ್ಪತ್ರೆಗೆ ಮೀನಮೇಷ

reportermys


ಅವಿನಾಶ್ ಜೈನಹಳ್ಳಿ ಮೈಸೂರು
ಮೈಸೂರು ತಾಲೂಕು ಆಸ್ಪತ್ರೆ ಸ್ಥಾಪನೆ ಕೋರಿ ಆರೋಗ್ಯ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ವರ್ಷವೇ ಕಳೆದರೂ, ಅನುಮತಿ ನೀಡಲು ಸರ್ಕಾರ ಮೀನಮೇಷ ಎಣಿಸುತ್ತಿದೆ.
ಸುತ್ತಮುತ್ತಲಿನ ಜಿಲ್ಲೆಗಳಿಗೆಲ್ಲ ದೊಡ್ಡಾಸ್ಪತ್ರೆಯಾಗಿರುವ ಕೆ.ಆರ್.ಆಸ್ಪತ್ರೆ, ಚೆಲುವಾಂಬ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆ ಮೈಸೂರಿನಲ್ಲೇ ಇದ್ದರೂ, ಜಿಲ್ಲೆಯಲ್ಲಿ ಅಧಿಕೃತ ಜಿಲ್ಲಾಸ್ಪತ್ರೆ ಹಾಗೂ ಮೈಸೂರು ತಾಲೂಕಿಗೆ ಅಧಿಕೃತ ತಾಲೂಕು ಆಸ್ಪತ್ರೆ ಇರಲಿಲ್ಲ.


ಹೀಗಾಗಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಜಿಲ್ಲಾಸ್ಪತ್ರೆ ಮಂಜೂರು ಮಾಡಿದ್ದರು. ಸದ್ಯ ಕೆಆರ್‌ಎಸ್ ರಸ್ತೆಯಲ್ಲಿರುವ ಸಾಂಕ್ರಾಮಿಕ ರೋಗಗಳ ಚಿಕಿತ್ಸಾ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಸ್ಪತ್ರೆ ಉದ್ಘಾಟನೆಗೊಂಡು ಕೋವಿಡ್ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿದೆ.


ನಗರದಲ್ಲಿ ಜಿಲ್ಲಾಸ್ಪತ್ರೆ ಸ್ಥಾಪಿಸುತ್ತಿರುವ ಬೆನ್ನಲ್ಲೇ, ಮೈಸೂರು ತಾಲೂಕು ಆಸ್ಪತ್ರೆಯೂ ಸ್ಥಾಪನೆಯಾಗಬೇಕು ಎಂಬ ಕೂಗು ಜೋರಾಗಿತ್ತು. ಹೀಗಾಗಿ, ನಾಲ್ಕು ವರ್ಷಗಳ ಹಿಂದೆ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಅಂದಿನ ಸಂಸದ ಆರ್.ಧ್ರುವನಾರಾಯಣ ಈ ಸಂಬಂಧ ಸೂಚನೆ ನೀಡಿದ್ದರು.


ಮೈಸೂರು ತಾಲೂಕಿನಲ್ಲಿ ತಾಲೂಕು ಆಸ್ಪತ್ರೆಯೇ ಇಲ್ಲ. ಮೈಸೂರು ನಗರದಲ್ಲೇ ಜಿಲ್ಲಾಸ್ಪತ್ರೆ ನಿರ್ಮಾಣವಾಗುತ್ತಿರುವುದರಿಂದ ತಾಲೂಕು ಆಸ್ಪತ್ರೆಯನ್ನು ವರುಣ ಗ್ರಾಮದಲ್ಲಿ ನಿರ್ಮಿಸಲು ಯೋಜನೆ ರೂಪಿಸುವಂತೆ ಆರೋಗ್ಯಾಧಿಕಾರಿಗೆ ಸೂಚನೆ ನೀಡಿದ್ದರು.

ಈ ಸಂಬಂಧ 2020ನೇ ಸಾಲಿನ ನವೆಂಬರ್‌ನಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದ ಅಂದಿನ ಡಿಎಚ್‌ಒ ಡಾ.ಬಿ.ಬಸವರಾಜು, ಮೈಸೂರಿನಲ್ಲಿ ತಾಲೂಕು ಆಸ್ಪತ್ರೆ ಇಲ್ಲದ ಕಾರಣ ವರುಣ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ತಾಲೂಕು ಆಸ್ಪತ್ರೆಯಾಗಿ ಪರಿವರ್ತಿಸುವಂತೆ ಕೋರಿದ್ದರು. ಆದರೆ, ಸರ್ಕಾರ ಅನುಮತಿ ನೀಡಿಲ್ಲ. ಈ ಸಂಬಂಧ ಸ್ಥಳೀಯ ಶಾಸಕರು ಒತ್ತಡ ಹೇರದ ಕಾರಣ ಪ್ರಸ್ತಾವನೆ, ಬರಿ ಪ್ರಸ್ತಾವನೆಯಾಗಿಯೇ ಉಳಿದಿದೆ.

ಆಸ್ಪತ್ರೆಯ ಲಾಭಗಳೇನು?
ವರುಣ ಗ್ರಾಮದ ಆಸ್ಪತ್ರೆ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿದ್ದು, ತಾಲೂಕು ಆಸ್ಪತ್ರೆಯಾಗಿ ಬದಲಾದರೆ ಸುಧಾರಿತ ವೈದ್ಯಕೀಯ ಸೇವೆ ನೀಡಲಿದೆ. ಸದ್ಯ ಒಬ್ಬರು ವೈದ್ಯರು, 6 ಬೆಡ್ (3 ಪುರುಷ -3 ಮಹಿಳೆ)ಗಳ ಸೌಲಭ್ಯ ಹೊಂದಿದೆ. ನಿತ್ಯ 40ರಿಂದ 60 ರೋಗಿಗಳು ಇಲ್ಲಿಗೆ ತಪಾಸಣೆಗೆ ಬರುತ್ತಾರೆ. ತಾಲೂಕು ಆಸ್ಪತ್ರೆಯಾದರೆ ಈಗಿರುವ 6 ಬೆಡ್‌ಗಳ ಆಸ್ಪತ್ರೆ 100 ಹಾಸಿಗೆಯ ಆಸ್ಪತ್ರೆಯಾಗಿ ಪರಿವರ್ತನೆಯಾಗಲು ಅವಕಾಶವಿದೆ. 95 ಪೂರ್ಣಕಾಲಿಕ ಸಿಬ್ಬಂದಿ ನೇಮಕವಾಗಲಿದ್ದಾರೆ. ಸ್ಕ್ಯಾನಿಂಗ್, ಕಣ್ಣು, ಮೂಗು, ರಕ್ತ ಪರೀಕ್ಷೆ, ಹೆರಿಗೆ ಸೇರಿದಂತೆ ವಿವಿಧ ಸೇವೆಗಳು ಲಭ್ಯವಾಗಲಿವೆ. ಹತ್ತು ವೈದ್ಯರು, ಒಬ್ಬ ದಂತ ವೈದ್ಯ, ಸಿಬ್ಬಂದಿ ನೇಮಕವಾಗಲಿದ್ದಾರೆ. ಜತೆಗೆ, ಹೊಸ ಕಟ್ಟಡ ನಿರ್ಮಾಣವಾಗಲಿದೆ.

ತುರ್ತಾಗಿ ಆಗಬೇಕಾದ್ದೇನು?
ವರುಣ ವಿಧಾನಸಭಾ ಕ್ಷೇತ್ರದ ಬಹುತೇಕ ಗ್ರಾಮಗಳ ಜನರು ಚಿಕಿತ್ಸೆಗಾಗಿ ವರುಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ. ಇಲ್ಲಿ ತಾಲೂಕು ಆಸ್ಪತ್ರೆಯಾಗುವ ಮೊದಲು ತುರ್ತು ಚಿಕಿತ್ಸೆ, ಒಳರೋಗಿ ಸೌಲಭ್ಯಗಳು ಬೇಕು ಎಂಬ ಬೇಡಿಕೆ ಇದೆ. ಇವುಗಳೊಂದಿಗೆ, ಎಕ್ಸ್‌ರೇ ಸೌಲಭ್ಯ, ಮಹಿಳಾ ಮತ್ತು ಮಕ್ಕಳ ವಿಭಾಗ, ಸ್ತ್ರೀರೋಗ ತಜ್ಞರ ಸಹಿತವಾದ ವಿವಿಧ ಸೌಲಭ್ಯಗಳು ಬೇಕಿವೆ.

ಒತ್ತಡ ಕಡಿಮೆಯಾಗಲಿದೆ:
ಕೆ.ಆರ್.ಆಸ್ಪತ್ರೆ ಮತ್ತು ಚೆಲುವಾಂಬ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಮೈಸೂರು ಸೇರಿ ಸುತ್ತಮುತ್ತಲಿನ ಜಿಲ್ಲೆಗಳಿಂದ ಈ ಆಸ್ಪತ್ರೆಗಳಿಗೆ ನಿತ್ಯ ಸಾವಿರಾರು ರೋಗಿಗಳು ಬರುತ್ತಾರೆ. ಇದರಿಂದ ಎಲ್ಲ ರೋಗಿಗಳಿಗೂ ಆರೋಗ್ಯ ಸೇವೆ ಸಮರ್ಪಕವಾಗಿ ಸಿಗದಂತಾಗಿದ್ದು, ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ.
ಚೆಲುವಾಂಬ ಆಸ್ಪತ್ರೆಯಲ್ಲಿ ನಿತ್ಯ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಹೆರಿಗೆಗಳಾಗುತ್ತಿವೆ. ಹೀಗಾಗಿ, ದಾಖಲಾಗುತ್ತಿರುವ ಗರ್ಭಿಣಿಯರು ಮತ್ತು ಮಕ್ಕಳು ಎಷ್ಟೋ ಬಾರಿ ಹಾಸಿಗೆಯಿಲ್ಲದೆ ನೆಲದ ಮೇಲೆ ಮಲಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಮೈಸೂರಿನಲ್ಲಿ ಜಿಲ್ಲಾಸ್ಪತ್ರೆ ಕಾರ್ಯಾರಂಭವಾಗಿ, ತಾಲೂಕು ಆಸ್ಪತ್ರೆಯೂ ನಿರ್ಮಾಣವಾದರೆ ಕೆ.ಆರ್.ಆಸ್ಪತ್ರೆ ಮತ್ತು ಚೆಲುವಾಂಬ ಆಸ್ಪತ್ರೆಗಳ ಮೇಲಿನ ಒತ್ತಡ ಕೊಂಚ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಹಣ ಕಳೆದುಕೊಳ್ಳುವುದು ತಪ್ಪಲಿದೆ. ಆದ್ದರಿಂದ ಸರ್ಕಾರ ಆದಷ್ಟು ಬೇಗ ತಾಲೂಕು ಆಸ್ಪತ್ರೆಗೆ ಅನುಮತಿ ನೀಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಜಿಲ್ಲೆಯ ಹೊಸ ತಾಲೂಕುಗಳಿಗೂ ತಾಲೂಕು ಆಸ್ಪತ್ರೆ ಬೇಕಿದೆ!

ಜಿಲ್ಲೆಯಲ್ಲಿ ಹೊಸದಾಗಿ ರಚನೆಗೊಂಡಿರುವ ತಾಲೂಕುಗಳಲ್ಲೂ ತಾಲೂಕು ಆಸ್ಪತ್ರೆಯನ್ನು ನಿರ್ಮಿಸಬೇಕಾಗಿದೆ. ಎಚ್.ಡಿ.ಕೋಟೆ ತಾಲೂಕಿನಿಂದ ಪ್ರತ್ಯೇಕಗೊಳಿಸಿ ರಚಿಸಿರುವ ಸರಗೂರು, ಕೆ.ಆರ್.ನಗರ ತಾಲೂಕಿನಿಂದ ಪ್ರತ್ಯೇಕಗೊಳಿಸಿ ರಚಿಸಿರುವ ಸಾಲಿಗ್ರಾಮದಲ್ಲಿ ತಾಲೂಕು ಆಸ್ಪತ್ರೆ ನಿರ್ಮಿಸಬೇಕಿದೆ. ಸದ್ಯ ಸರಗೂರು ಮತ್ತು ಸಾಲಿಗ್ರಾಮದಲ್ಲಿರುವ ಆರೋಗ್ಯ ಕೇಂದ್ರಗಳನ್ನೇ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಬೇಕಿದೆ.

ಕ್ವೋಟ್
ಮೈಸೂರು ತಾಲೂಕಿನಲ್ಲಿ ತಾಲೂಕು ಆಸ್ಪತ್ರೆ ಇಲ್ಲದಿರುವ ಕಾರಣ ವರುಣ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯನ್ನಾಗಿ ಪರಿರ್ವತಿಸುವಂತೆ ಕೋರಿ ಸರ್ಕಾರಕ್ಕೆ ಹಿಂದಿನ ಜಿಲ್ಲಾ ಆರೋಗ್ಯಾಧಿಕಾರಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ, ಸದ್ಯ ಸರ್ಕಾರ ಹಾಗೂ ಇಡೀ ಆರೋಗ್ಯ ಇಲಾಖೆ ಕರೊನಾ ವಿರುದ್ಧ ಹೋರಾಟ ನಡೆಸುತ್ತಿರುವುದರಿಂದ ಕೊಂಚ ತಡವಾಗುತ್ತಿದೆ. ಕರೊನಾ ವೈರಸ್ ನಿಯಂತ್ರಣಕ್ಕೆ ಬಂದ ಕೂಡಲೇ ಅನುಮತಿ ಸಿಗುವ ವಿಶ್ವಾಸವಿದೆ.
ಡಾ.ಕೆ.ಎಚ್. ಪ್ರಸಾದ್, ಜಿಲ್ಲಾ ಆರೋಗ್ಯಾಧಿಕಾರಿ