ಜಿಲ್ಲೆ

ಪಾರ್ಕಿಂಗ್ ತಾಣವಾದ ತಾಲೂಕು ಆಡಳಿತ ಸೌಧ

ಗಂಗಾಧರ ಬಿ ವಿ

ಅಡ್ಡಾದಿಡ್ಡಿ ವಾಹನ ನಿಲುಗಡೆಯಿಂದ ಕಚೇರಿಗೆ ಹೋಗಿ ಬರಲು ಸಮಸ್ಯೆ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ನಗರದಲ್ಲಿನ ತಾಲೂಕು ಆಡಳಿತಸೌಧದ ಆವರಣ ಪಾರ್ಕಿಂಗ್ ಸ್ಥಳವಾಗಿ ಮಾರ್ಪಟ್ಟು, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ.

ಬೆಂಗಳೂರು-ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ತಾಲೂಕು ಆಡಳಿತ ಸೌಧವಿದದ್ದು, ತಹಸೀಲ್ದಾರ್ ಕಚೇರಿ, ಉಪವಿಭಾಗಾಧಿಕಾರಿ ಕಚೇರಿ, ಖಜಾನೆ ಇಲಾಖೆ, ತಾಲೂಕು ಪಂಚಾಯಿತಿ, ಸರ್ವೇ ಇಲಾಖೆ, ಆಸ್ತಿ ದಾಖಲಾತಿ ಕೊಠಡಿಗಳು, ಕಂದಾಯ ಇಲಾಖೆಗೆ ಸಂಬಂಧಿತ ಅಗತ್ಯ ಸೇವೆ ನೀಡುವ ಹತ್ತಾರು ವಿಭಾಗಗಗಳು ಕಾರ್ಯನಿರ್ವಹಿಸುತ್ತಿವೆ.

ದಿನನಿತ್ಯ ಸಾವಿರಾರು ಮಂದಿ ಸರ್ಕಾರಿ ಸೇವೆ ಪಡೆಯಲು, ಅಧಿಕಾರಿಗಳು ಕಚೇರಿ ಕೆಲಸಕ್ಕೆ ಬರುತ್ತಾರೆ. ಆದರೆ, ಕೆಲಸ ಕಾರ್ಯಗಳಿಗೆ ಬರುವ ಕೆಲವರು ವಾಹನಗಳನ್ನು ನಡುರಸ್ತೆ, ಕಚೇರಿ ಗೇಟ್‌ನಲ್ಲೇ ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿರುವುದೇ ಸಮಸ್ಯೆಗೆ ಕಾರಣವಾಗಿದೆ.

ಇನ್ನು ಕಚೇರಿ ಮುಂಭಾಗದ ಬೆಂಗಳೂರು-ಮೈಸೂರು ಹೆದ್ದಾರಿಯ ಸರ್ವೀಸ್ ರಸ್ತೆಯುದ್ದಕ್ಕೂ ಅರ್ಧ ರಸ್ತೆಗೆ ಬಂದಂತೆ ಕಾರುಗಳನ್ನು ನಿಲ್ಲಿಸುತ್ತಾರೆ. ಕೆಲವೊಮ್ಮೆ ನಾಗರಿಕರು ನಡೆದುಕೊಂಡು ಹೋಗಲೂ ಸಾಧ್ಯವಾಗದ ಸ್ಥಿತಿ ಇದೆ. ಇನ್ನು ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸುವುದರಿಂದ ಇತರ ವಾಹನಗಳು ಸಂಚರಿಸುವಾಗ ಆಕಸ್ಮಿಕವಾಗಿ ತಾಕೀದರೂ ಜಗಳಗಳು ಉಂಟಾಗುತ್ತಿವೆ. ಕೂಡಲೇ ಸಂಬಂಧಪಟ್ಟವರು ತಾಲೂಕು ಆಡಳಿತಸೌಧದ ಮುಂದೆ ಅಡ್ಡಾದಿಡ್ಡಿ ವಾಹನಗಳ ನಿಲುಗಡೆಗೆ ಕಡಿವಾಣ ಹಾಕಿ, ಸೂಕ್ತ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ನೋ ಪಾರ್ಕಿಂಗ್ ಲಕದ ಎದುರೇ ನಿಲ್ಲಿಸ್ತಾರೆ...

ಕಚೇರಿ ಗೇಟಿನ ಮುಂಭಾಗದಲ್ಲೇ ಬ್ಯಾರಿಕೇಡ್ ಹಾಕಿ, ‘ನೋ ಪಾರ್ಕಿಂಗ್’ ಸೂಚನಾ ಫಲಕ ಹಾಕಿದ್ದರೂ ಬ್ಯಾರಿಕೇಡ್ ಒಳಗೆ ದ್ವಿಚಕ್ರ ವಾಹನ ನಿಲ್ಲಿಸಿ ಹೋಗುತ್ತಾರೆ. ಗೇಟಿನ ಮುಂಭಾಗವಂತೂ ಬೇಕಾಬಿಟ್ಟಿ ಬೈಕ್‌ಗಳನ್ನು ನಿಂತಿರುತ್ತವೆ.

ಎಷ್ಟು ಹೇಳಿದರೂ ಕೇಳುವುದಿಲ್ಲ...

ವಾಹನಗಳ ಅಡ್ಡಾದಿಡ್ಡಿ ಪಾರ್ಕಿಂಗ್ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೆ, ನಾವು ಎಷ್ಟು ಹೇಳಿದರೂ ಕೇಳುವುದಿಲ್ಲ. ವಾಹನಗಳ ಪಾರ್ಕಿಂಗ್‌ಗೆ ಕಚೇರಿ ಹಿಂಭಾಗ ಮತ್ತು ಒಳ ಭಾಗದಲ್ಲಿ ಸ್ಥಳಾವಕಾಶವಿದೆ. ಅಲ್ಲದೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲೂ ಸಾರ್ವಜನಿಕ ಓಡಾಟಕ್ಕೆ ತೊಂದರೆಯಾಗದಂತೆ ಒಂದು ಭಾಗದಲ್ಲಿ ವಾಹನ ನಿಲ್ಲಿಸಬಹುದು. ಆದರೂ ಬಹುತೇಕರು ತಾಲೂಕು ಆಡಳಿತ ಸೌಧದ ಆವರಣದಲ್ಲೇ, ಕೆಲವೊಮ್ಮೆ ಬಾಗಿಲಲ್ಲೇ ಬೈಕ್‌ಗಳನ್ನು ನಿಲ್ಲಿಸಿ ಹೋಗುತ್ತಾರೆ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದರು.

ದಂಡ ಹಾಕಿ

ಸಂಚಾರ ಪೊಲೀಸರು ಒಂದೆರಡು ಬಾರಿ ತಾಲೂಕು ಆಡಳಿತ ಸೌಧದ ಕಡೆ ಭೇಟಿ ನೀಡಿ, ಅಡ್ಡಾದಿಡ್ಡಿ ನಿಲ್ಲುವ ವಾಹನಗಳ ಪರಿಶೀಲನೆ ನಡೆಸಿ ದಂಡ ವಿಧಿಸಿ, ಎಚ್ಚರಿಕೆ ನೀಡಿದರೆ, ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನಗಳ ನಿಲುಗಡೆಗೆ ಕಡಿವಾಣ ಹಾಕಬಹುದು ಎಂಬುದು ನಾಗರಿಕರ ಅಭಿಪ್ರಾಯವಾಗಿದೆ.

ಕಚೇರಿ ವಾಹನಗಳ ಓಡಾಟ, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ಗೇಟಿನ ಮುಂಭಾಗವೇ ಬ್ಯಾರಿಕೇಡ್ ಅಳವಡಿಸಿ, ‘ವಾಹನ ನಿಲ್ಲಿಸಬೇಡಿ’ ಬರಹದ ಬ್ಯಾನರ್ ಹಾಕಲಾಗಿದೆ. ಆದರೂ ಬ್ಯಾರಿಕೇಡ್ ದೂಡಿ ವಾಹನ ನಿಲ್ಲಿಸಿ ಹೋಗುತ್ತಾರೆ. ಇನ್ನಾದರೂ ವಾಹನ ಸವಾರರು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಅನುಸರಿಸಲಾಗುವುದು.ಬಿ.ತೇಜಸ್ವಿನಿ, ತಹಸೀಲ್ದಾರ್, ರಾಮನಗರಅಧಿಕಾರಿಗಳೇ ಎಲ್ಲದಕ್ಕೂ ಜವಾಬ್ದಾರಿ ಹೊರಲು ಆಗುವುದಿಲ್ಲ. ಸಾರ್ವಜನಿಕರೂ ‘ಇದು ನಮ್ಮ ಕಚೇರಿ, ನಮ್ಮ ಜನರಿಗೆ ಓಡಾಟಕ್ಕೆ ತೊಂದರೆಯಾಗುತ್ತದೆ’ ಎಂಬುದನ್ನು ಮನಗಾಣಬೇಕು. ಕಚೇರಿ ಕೆಲಸಕ್ಕೆ ಹೋಗುವ ಜನರಿಗೆ, ಬೆಂಗಳೂರು-ಮೈಸೂರು ರಸ್ತೆಯಲ್ಲಿ ಸಂಚರಿಸುವ ಇತರ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗದಂತೆ ನಿಗದಿತ ಸ್ಥಳದಲ್ಲೇ ವಾಹನಗಳನ್ನು ನಿಲ್ಲಿಸಬೇಕು. ಇದು ನಾಗರಿಕರ ಜವಾಬ್ದಾರಿ.ಮುರುಗೇಶ್ರಾಮನಗರಮುರುಗೇಶ್, ರಾಮನಗರ.