ಬೆಂಗಳೂರು: ಮುಂಬೈನ ಘಾಟ್ಕೋಪರ್‌ಪಂತ್ ನಗರದದಲ್ಲಿ ಸೋಮವಾರ ಬಿರುಗಾಳಿಗೆ ಬೃಹತ್ ಜಾಹೀರಾತು ಫಲಕ ನೆಲಕ್ಕುರಳಿ ಅಪಾರ ಸಾವು-ನೋವು ಸಂಭವಿಸಿದ ಬೆನ್ನಲ್ಲೇ, ರಾಜಧಾನಿ ಬೆಂಗಳೂರು ನಗರದಲ್ಲೂ ಜನನಿಬಿಡ ಸ್ಥಳಗಳಲ್ಲಿ ಪ್ರದರ್ಶಿತವಾಗುತ್ತಿರುವ ಎತ್ತರದ ಜಾಹೀರಾತು ಫಲಕಗಳು ಎಷ್ಟರಮಟ್ಟಿಗೆ ಸುರಕ್ಷಿತವಾಗಿವೆ ಎಂಬ ಪ್ರಶ್ನೆ ಉದ್ಭವಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ನೂರಾರು ಸಂಖ್ಯೆಯ ಎತ್ತರದ ಜಾಹೀರಾತು ಫಲಕಗಳು ಇವೆ. ಇವುಗಳಲ್ಲಿ ಕೆಲವು ಅನುಮತಿ ಪಡೆಯದೆ ಜಾಹೀರಾತು ಪ್ರದರ್ಶನ ಮಾಡುತ್ತಿದ್ದು, ಅನಧೀಕೃತ ಪಟ್ಟಿಗೆ ಸೇರಿವೆ. ಏರ್‌ಪೋರ್ಟ್ ರಸ್ತೆ, ಹಳೇ ವಿಮಾನನಿಲ್ದಾಣ ರಸ್ತೆ, ಮೈಸೂರು ರಸ್ತೆ, ಹೊಸಕೋಟೆ ರಸ್ತೆ, ಸರ್ಜಾಪುರ ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆಗಳ ಬದಿ ಬೃಹತ್ ಜಾಹೀರಾತು ಫಲಕಗಳು ಇವೆ. ಜತೆಗೆ ಖಾಸಗಿ ಸ್ವತ್ತುಗಳಲ್ಲಿ ಫಲಕಗಳನ್ನು ಖಾಸಗಿ ಕಂಪನಿಗಳು ಅಳವಡಿಸಿವೆ.
ಇಲ್ಲೆಲ್ಲ ವಾಣಿಜ್ಯ ಉದ್ದೇಶದ ಈ ಲಕಗಳು ನಿಯಮಗಳನ್ನು ಉಲ್ಲಂಸಿರುವುದೇ ಹೆಚ್ಚು. ಸುರಕ್ಷಿತ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕಿದ್ದರೂ, ಕೆಲವೊಂದು ಅಂಶಗಳಲ್ಲಿ ರಾಜೀ ಮಾಡಿಕೊಂಡ ಪರಿಣಾಮ ಪಾಲಿಕೆಗೆ ನಿರೀಕ್ಷಿತ ಆದಾಯ ಕೂಡ ಸಂದಾಯವಾಗುತ್ತಿಲ್ಲ. ಮುಖ್ಯವಾಗಿ ರಸ್ತೆ ಬದಿ ಸ್ಥಾಪಿಸುವ ಈ ಫಲಕಗಳಲ್ಲಿ ಪ್ರದರ್ಶಿಸಿರುವ ಜಾಹೀರಾತನ್ನು ವಾಹನ ಚಾಲಕರು ವೀಕ್ಷಿಸುವುದರಿಂದ ಚಾಲನೆ ವೇಳೆ ಗಮನ ಬೇರೆಡೆಗೆ ಸೆಳೆಯುವಂತಾಗುತ್ತದೆ. ಇದರಿಂದ ಅಪಘಾತಗಳು ಸಂಭವಿಸುವುದುಂಟು. ಇದರ ಹೊರತಾಗಿಯೂ ಎತ್ತರದ ಫಲಕಗಳನ್ನು ಅಳವಡಿಸುವ ವೇಳೆ ಕಬ್ಬಿಣದ ಸ್ಥಾವರಗಳನ್ನು ನೆಲದಾಳಕ್ಕೆ ಇಳಿಸಿ ನೆಡದಿದ್ದಲ್ಲಿ ಭಾರೀ ಗಾಳಿಗೆ ಬೀಳುವ ಅಪಾಯ ತಪ್ಪಿದ್ದಲ್ಲ. ಅದರಲ್ಲೂ ಏಕ ಕಂಬವಿರುವ ಜಾಹೀರಾತು ಫಲಕಗಳು ಅಪಾಯಕಾರಿ ಎಂದೇ ಹೇಳಲಾಗುತ್ತದೆ.
ಅವಘಡ ಮುನ್ನ ಎಚ್ಚೆತ್ತುಕೊಳ್ಳಬಾರದೇಕೆ?:
ಕಳೆದ ತಿಂಗಳು ಹೆಬ್ಬಾಳದ ರಿಂಗ್ ರಸ್ತೆಯ ಬಳಿಯಿದ್ದ ಜಾಹೀರಾತು ಫಲಕಕ್ಕೆ ಮಧ್ಯಾಹ್ನದ ವೇಳೆ ಶಾರ್ಟ್ ಸಕೀರ್ಟ್‌ನಿಂದ ಬೆಂಕಿ ಹೊತ್ತಿಕೊಂಡು ಆ್ಯಡ್ ಪರದೆಯು ಸುಟ್ಟುಹೋಗಿತ್ತು. ಘಟನೆ ನಡೆದ ಸಮೀಪದಲ್ಲೇ ಅಗ್ನಿಶಾಮಕ ದಳದ ಕೇಂದ್ರ ಇದ್ದ ಕಾರಣ ಬೆಂಕಿ ನಂದಿಸುವ ವಾಹನಗಳಲ್ಲಿ ಬಂದಂತಹ ಸಿಬ್ಬಂದಿ ಅಗ್ನಿ ಅನಾಹುತವನ್ನು ತಪ್ಪಿಸಿದ್ದರು. ಇಂಥದ್ದೇ ಅವಘಡ ಫಲಕ ಅಳವಡಿಸುವ ವೇಳೆಯೂ ನಡೆಯುತ್ತಿದೆ. ಭಾರೀ ತೂಕದ ಫಲಕಗಳನ್ನು ಜೆಸಿಬಿ ಮೂಲಕ ನಿಲ್ಲಿಸುವ ವೇಳೆ ಭಾರಕ್ಕೆ ಜಾರಿ ಬೀಳುವ ಪ್ರಸಂಗಗಳು ನಡೆದಿವೆ. ಇದೀಗ ಪೂರ್ವ ಮುಂಗಾರು ವೇಳೆ ಭಾರೀ ಮಳೆ ಗಾಳಿಗೆ ನೂರಾರು ಮರಗಳು, ಟೊಂಗೆಗಳು ಧರೆಗುರುಳಿವೆ. ಜಾಹೀರಾತು ಫಲಕಗಳು ಬಿದ್ದಲ್ಲಿ ಹೆಚ್ಚಿನ ಅನಾಹುತವಾಗಲಿದ್ದು, ಇಂತಹವುಗಳನ್ನು ಮೊದಲೇ ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬಾರದೇಕೆ ಎಂದು ಮಾಜಿ ಕಾರ್ಪೊರೇಟರ್ ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ನಿರ್ವಹಣೆ ಇಲ್ಲದೆ ಆದಾಯ ಖೋತಾ:
ನಗರದಲ್ಲಿ ಹಲವು ವರ್ಷಗಳಿಂದ ಅವ್ಯಾಹತವಾಗಿ ನಡೆದುಕೊಂಡು ಬರುತ್ತಿದ್ದ ಅನಧಿಕೃತ ಜಾಹೀರಾತು ಫಲಕಗಳಿಗೆ ಕಡಿವಾಣ ಹಾಕಲು ಹೈಕೋರ್ಟ್ ಆಗಾಗ್ಗೆ ಚಾಟಿ ಬೀಸುತ್ತಿತ್ತು. ಪಾಲಿಕೆ ಹಾಗೂ ಸರ್ಕಾರಕ್ಕೆ ನೋಟಿಸ್ ಮೇಲೆ ನೋಟಿಸ್ ನೀಡಿದ ಬಳಿಕ ಮಾರ್ಗಸೂಚಿಯನ್ನು ಸಿದ್ಧಪಡಿಸಿ ಜಾರಿಗೊಳಿಸಲಾಗುತ್ತಿದೆ. ಆದರೆ, ಆದಾಯದ ದೃಷ್ಟಿಯಿಂದ ಸಮರ್ಪಕ ನಿರ್ವಹಣೆ ಮಾಡದ ಕಾರಣ ಬಿಬಿಎಂಪಿಗೆ ಹೆಚ್ಚಿನ ಹಣ ವಸೂಲು ಆಗುತ್ತಿಲ್ಲ ಎಂಬ ಆಕ್ಷೇಪವೂ ಕೇಳಿಬಂದಿದೆ.