ಜಿಲ್ಲೆ

ರಾಜಕೀಯ ಮಾತನಾಡಿದರೆ ಜನರಿಗೆ ಉಪಯೋಗವಿಲ್ಲ

ಹಾಸನ: ರಾಜ್ಯ ಸಚಿವ ಸಂಪುಟ ಪುನಾಚರನೆ ಹಾಗೂ ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ ಎಂಬ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಹೇಳಿಕೆ ನನಗೆ ಗೊತ್ತಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನದ ತ್ಯಾಗಕ್ಕೆ ಸಿದ್ಧ ಎಂಬ ಕೃಷ್ಣ ಬೈರೇಗೌಡ ಹೇಳಿಕೆ ನನಗೆ ಗೊತ್ತಿಲ್ಲ. ಹಾಗೆಯೇ ಸಚಿವ ಸಂಪುಟ ಪುನಾರಚನೆ ವಿಚಾರವೂ ನನಗೆ ತಿಳಿದಿಲ್ಲ. ಅದರ ಬಗ್ಗೆ ನನಗೆ ಗೊತ್ತಿಲ್ಲ, ಸಂಪುಟ ಪುನಾರಚನೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿರುತ್ತದೆ. ನಮ್ಮ ಪಕ್ಷದ ಪದ್ಧತಿ ಏನಿದೆ ಅಂದರೆ ಸಿಎಂ ಅವರು ಎಐಸಿಸಿ ಅಧ್ಯಕ್ಷರು, ಎಐಸಿಸಿ ಹಿರಿಯ ಮುಖಂಡರ ಜತೆ ಚರ್ಚೆ ಮಾಡಿ ಪುನಾರಚನೆ ಮಾಡುವುದು ಅವರ ಪರಮಾಧಿಕಾರ. ಆದರೆ ಆ ಬಗ್ಗೆ ನನಗೆ ಮಾಹಿತಿ ಇಲ್ಲ. ಇದೇ ವೇಳೆ ಸಿಎಂ ಹುದ್ದೆಗೆ ಮುಂದಿನ ಉತ್ತರಾಧಿಕಾರಿ ಕುರಿತು ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ, ಅವರು ಅವರ ಸೈದ್ಧಾಂತಿಕ ನಿಲುವಿನ ಹಿನ್ನೆಲೆಯಲ್ಲಿ ಆ ರೀತಿ ಹೇಳಿದ್ದಾರೆ ಅಂತ ಸಿಎಂ ಅವರೇ ಹೇಳಿದ್ದಾರೆ ಎಂದರು.

ನಾನು ಯಾವುದೇ ವಿಚಾರ ಮಾತನಾಡಿದರೆ ಅದರಿಂದ ಸಾರ್ವಜನಿಕರಿಗೆ ಅನುಕೂಲ ಆಗಬೇಕು. ಈ ವಿಷಯದಿಂದ ಸಾರ್ವಜನಿಕರಿಗೆ ಯಾವುದೇ ಉಪಯೋಗವಿಲ್ಲ. ಮಾಧ್ಯಮದವರೂ ಕೂಡ ಜನರಿಗೆ ಅನುಕೂಲವಾಗುವ ಪ್ರಶ್ನೆಗಳನ್ನು ಕೇಳಿದರೆ ಅದಕ್ಕೆ ಉತ್ತರಿಸಬಹುದು. ನನ್ನದೊಂದು ಪಾಲಿಸಿ ಇದೆ. ನಾನಾಡುವ ಪ್ರತಿಯೊಂದು ಮಾತು ಸಾರ್ವಜನಿಕ ಹಿತಾಸಕ್ತಿಯಿಂದ ಇರಬೇಕು. ನಾನು ಮಾಡುವ ಪ್ರತಿಯೊಂದು ಕೆಲಸವೂ ಸಾರ್ವಜನಿಕ ಹಿತಾಸಕ್ತಿಯಿಂದ ಇರಬೇಕು. ರಾಜಕೀಯವಾಗಿ ಎಷ್ಟೇ ಏನೇ ಮಾತನಾಡಿದರೂ ಕೂಡ ಅದರಿಂದ ಜನರಿಗೆ ಏನೂ ಉಪಯೋಗ ಆಗಲ್ಲ ಎಂದು ಹೇಳಿದರು.

ಇದೇ ವೇಳೆ ನವೆಂಬರ್ ಕ್ರಾಂತಿ ಕುರಿತು ಕೇಳಿದ ಪ್ರಶ್ನೆಗೆ, ಇದೆಲ್ಲಾ ಮಾಧ್ಯಮದವರ ಸೃಷ್ಟಿ, ಯಾರಾದರೂ ಮಿನಿಸ್ಟರ್ ಅಥವಾ ಎಂಎಲ್‌ಎ ಪ್ರೆಸ್ ಕಾನ್ಫರೆನ್ಸ್ ಕರೆದು ಹೇಳಿದ್ದಾರಾ? ಎಲ್ಲೋ ಹೋಗುತ್ತಾ ಇರುತ್ತಾರೆ. ನೀವು ಕೇಳಿದ್ದೀರಿ, ಈಗ ನನಗೆ ಕೇಳುತ್ತಿದ್ದೀರಲ್ಲ ಅದೇ ರೀತಿ. ಇದರ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ಸ್ಪಷ್ಟೀಕರಣ ಕೊಟ್ಟಿದ್ದಾರೆ ಎಂದರು.